ಮೈಸೂರು:ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಚಾಲಕ ಮತ್ತೊಬ್ಬ ಚಾಲಕ ಸ್ನೇಹಿತನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಬಳಿ ಸೋಮವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕುಲದೀಪ್ ಚಾಕು ಇರಿತಕ್ಕೆ ಒಳಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈತನ ಸ್ನೇಹಿತ ಲಾರಿ ಚಾಲಕನಾಗಿರುವ ಮಧ್ಯಪ್ರದೇಶ ಮೂಲದ ಗಣೇಶ್‌ಪ್ರಸಾದ್ ಹಲ್ಲೆ ನಡೆಸಿದ್ದಾನೆ.
ಇಬ್ಬರೂ ಸ್ನೇಹಿತರಾಗಿದ್ದು, ಸೋಮವಾರ ರಾತ್ರಿ 10 ಗಂಟೆ ವರೆಗೆ ಮದ್ಯ ಸೇವನೆ ಮಾಡಿದ್ದಾರೆ. ಈ ಮಧ್ಯೆ ಚಾಲಕ ಕುಲದೀಪ್ ಮಾತನಾಡುವಾಗ ಮದ್ಯಪ್ರದೇಶದವರು ಮೋಸಗಾರರು. ಅವರನ್ನು ನಂಬುವಂತಿಲ್ಲ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ಗಣೇಶ್, ತನ್ನ ಲಾರಿಯಲ್ಲಿ ಇಟ್ಟಿದ್ದ ಚಾಕುವನ್ನು ತಂದು ಇರಿದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.