ಬೆಳಗಾವಿ: ತಾನು ಸೇನಾಧಿಕಾರಿ ಎಂದು ಸುಳ್ಳು ಹೇಳಿಕೊಂಡು ಐವರು ಮಹಿಳೆಯರನ್ನು ಮದುವೆಯಾದವ ಕೊನೆಗೂ ಅಸಲಿ ಯೋಧರು ನೀಡಿದ ಮಾಹಿತಿ ಮೇರೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಸುಳ್ಳು ಹೇಳುವುದನ್ನು ಚಾಳಿ ಆಗಿಸಿಕೊಂಡಿರುವ ಈತ ಮೃತ ಯೋಧರ ಕುಟುಂಬಗಳನ್ನೇ ಗುರಿಯಾಗಿಸಿ ಮೋಸ ಮಾಡುತ್ತಿದ್ದ. ಗ್ರಾಮೀಣ ಪ್ರದೇಶಗಳಲ್ಲಿ ಮೃತ ಯೋಧರ ಮನೆಗೆ ತೆರಳಿ, 'ಯೋಧರಿಗೊಂದು ಸಲಾಮ್' ಕಾರ್ಯಕ್ರಮ ಮಾಡುವುದಾಗಿ ಹೇಳಿ ಮೃತ ಯೋಧರ ಕುಟುಂಬ ಹಾಗೂ ಗ್ರಾಮಸ್ಥರನ್ನ ನಂಬಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದ. ಅಷ್ಟು ಮಾತ್ರವಲ್ಲ, ಐದಕ್ಕೂ ಹೆಚ್ಚು ಮಹಿಳೆಯರನ್ನೂ ಈತ ಮದುವೆಯಾಗಿದ್ದಾನೆ.
ಹೀಗೆ ಯೋಧನ ಗೆಟಪ್ನಲ್ಲಿ ಮೋಸ ಮಾಡಿ, ಈಗ ಬಂಧನಕ್ಕೊಳಗಾಗಿರುವ ವ್ಯಕ್ತಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಮಂಜುನಾಥ ಬಿರಾದಾರ( 37). ಈತ ಬೆಳಗಾವಿ ಸೇನಾ ಕ್ಯಾಂಪ್ ಪ್ರದೇಶದಲ್ಲಿ ಸೇನಾಧಿಕಾರಿಯ ಬಟ್ಟೆ ಧರಿಸಿ ಅನುಮಾನಾಸ್ಪದವಾಗಿ ಸುತ್ತಾಡುವುದನ್ನು ಗಮನಿಸಿದ ಅಸಲಿ ಸೇನಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ವಶಕ್ಕೆ ಪಡೆದು ವಿಚಾರಿಸಿದಾಗ ನಕಲಿ ಸೇನಾಧಿಕಾರಿ ಎಂಬುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.