ಮೈಸೂರು: ಸ್ವೀಡನ್‌ನಲ್ಲಿ ಬೆಳೆದಿರುವ ಮೈಸೂರು ಮೂಲದ ಜಾಲಿ ಸ್ಯಾಂಡ್ ಬರ್ಗ್ ಎಂಬ ಮಹಿಳೆ ಭಾರತದಲ್ಲಿರುವ ತನ್ನ ಮೂಲ ಕುಟುಂಬದ ಹುಡುಕಾಟ ನಡೆಸಿದ್ದಾರೆ.
ಜಾಲಿ ಸ್ಯಾಂಡ್ ಬರ್ಗ್ ಅವರು 8 ವರ್ಷದ ಬಾಲಕಿಯಾಗಿದ್ದಾಗ 1989ರಲ್ಲಿ ಆಶ್ರಯ ಚಿಲ್ಡ್ರನ್ ಹೋಂ ಎಂಬ ಸಂಸ್ಥೆಗೆ ಸೇರಿಕೊಂಡರು. ಬಳಿಕ ಸ್ವೀಡನ್ ದೇಶದ ಕುಟುಂಬವೊಂದು ಈ ಬಾಲಕಿಯನ್ನು ದತ್ತು ಸ್ವೀಕರಿಸಿತು. ಈಗ ಅಲ್ಲಿಯೇ ಬೆಳೆದು ದೊಡ್ಡವಳಾಗಿರುವ ಜಾಲಿ ಸ್ಯಾಂಡ್ ಬರ್ಗ್ ತನ್ನ ಕುಟುಂಬ ಸದಸ್ಯರ ಪತ್ತೆಗೆ ಪ್ರಯಾಸಪಡುತ್ತಿದ್ದಾರೆ.
ಅಲ್ಲಿಯ ನಿವಾಸಿ ಜಾಲಿ (ನೆನಪಿರುವಂತೆ ಮೂಲ ಹೆಸರು ಜಾನು) ಮೂಲತಃ ಮೈಸೂರು ಜಿಲ್ಲೆಯವರು. 1985ರಲ್ಲಿ ಜನಿಸಿದ್ದಾರೆ. ತಾಯಿ ಮಂಡ್ಯ ಬಳಿಯ ಮದ್ದೂರಿನವರು. ತಂದೆ ಮೈಸೂರಿನವರು.
‘ಈಗ ಮದ್ದೂರಿನ ಮೂಲವನ್ನು ಹುಡುಕಿ ಹೊರಟಾಗ ನನ್ನ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವವರು ನನ್ನನ್ನು ಆಶ್ರಯ ಚಿಲ್ಡ್ರನ್ ಹೋಂ ಸಂಸ್ಥೆಗೆ ನೀಡಿದ್ದರೆಂಬುದು ತಿಳಿದುಬಂದಿದೆ. ಆಕೆಗೆ ನನ್ನನ್ನು ನೀಡಿದವರು ಯಾರು ಎಂಬುದು ತಿಳಿದಿಲ್ಲ. ಏಕೆಂದರೆ, ಆಕೆ ಈ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಜಾಲಿ ಸ್ಯಾಂಡ್ ಬರ್ಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತನ್ನ ತಾಯಿಯ ಹೆಸರು ವಸಂತಮ್ಮ. ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಾರಣ ಆಕೆ ಕಷ್ಟದ ಜೀವನ ಸಾಗಿಸುತ್ತಿದ್ದರು. ಹೀಗಾಗಿ ತನ್ನ ಅಜ್ಜಿ, ಪರಿಚಿತರಾದ ಜಯಮ್ಮ ಎಂಬುವವರಿಗೆ ತನ್ನನ್ನು ನೀಡಿದ್ದರು. ಹೀಗಾಗಿ ಆಕೆ ತನ್ನನ್ನು ಬೆಂಗಳೂರಿನ ಮೇರಿ ಕಾನ್ವೆಂಟ್‌ಗೆ ಕರೆತಂದಾಗ ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ.
ಈಗ ನನಗೆ ತಿಳಿದ ಯಾರೂ ಬದುಕಿಲ್ಲ. ಹೀಗಿದ್ದರೂ ನನಗೆ ಸಹೋದರರು, ಸಹೋದರಿಯರು ಇರಬಹುದು. ಅವರ ಹುಡುಕಾಟ ನಡೆಸಿದ್ದೇನೆ. ಮಾಹಿತಿ ತಿಳಿದವರು ಮೊ.9822206485, 8329403661 ಸಂಪರ್ಕಿಸಿ ಎಂದು ಹೇಳಿದರು.
ಅಂಜಲಿ ಪವಾರ್, ಪತಿ ಎರಿಕ್ ಸ್ಯಾಂಡ್‌ಬರ್ಗ್ ಗೋಷ್ಠಿಯಲ್ಲಿದ್ದರು.