ಜಿಲ್ಲೆ

ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಬೆಂಗಳೂರು: ಯೋಗ ಎಲ್ಲರ ಕ್ಷೇಮ, ನೆಮ್ಮದಿ ಬಯಸುವಂತಹದ್ದಾಗಿದೆ. ಆದರೆ ಯೋಗಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿರುವುದು ಬೇಸರದ ಸಂಗತಿ ಎಂದು ಚಿತ್ರನಟಿ, ಯೋಗಪಟು ಅದಿತಿ ಪ್ರಭುದೇವ ವಿಷಾದಿಸಿದರು.

ರಾಜ್ಯ ಬಿಜೆಪಿ ಕಚೇರಿ ಮುಂದೆ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅದಿತಿ, ಯೋಗ ಯಾವುದೇ ಧರ್ಮ, ಮತ-ಪಂಥಕ್ಕೆ ಸೀಮಿತವಾದದ್ದಲ್ಲ. ಎಲ್ಲರೂ ಅಭ್ಯಾಸ ಮಾಡಬಹುದಾಗಿದೆ. ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಬಹಳಷ್ಟು ಕಸರತ್ತು ಮಾಡುತ್ತೇವೆ. ಆದರೆ, ಯೋಗದಿಂದ ದೈಹಿಕ, ಮಾನಸಿಕ, ಆತ್ಮ ಹಾಗೂ ಪರಮಾತ್ಮ ಈ ನಾಲ್ಕನ್ನೂ ಸಾಧಿಸಬಹುದಾಗಿದೆ ಎಂದರು.

ಉತ್ತಮ ಜೀವನ ಶೈಲಿಗೆ ಸಾಧನ: ವ್ಯಾಸ ಯೋಗ ವಿಶ್ವ ವಿದ್ಯಾಲಯದ ಉಪಕುಲಪತಿ ಬಿ.ಆರ್.ರಾಮಕೃಷ್ಣ ಮಾತನಾಡಿ, ಉತ್ತಮ ಜೀವನ ಶೈಲಿಗೆ ಯೋಗ ಸಾಧನ. ಇದರಿಂದ ಅನೇಕ ಕಾಯಿಲೆಗಳಿಂದ ಮುಕ್ತರಾಗಿ ವೈಯಕ್ತಿಕ ಆರೋಗ್ಯ ಹೊಂದಬಹುದಾಗಿದ್ದು, ಮಾನಸಿಕ, ಬೌದ್ಧಿಕ ಸಾಮರಸ್ಯದ ಜತೆಗೆ ಕುಟುಂಬವು ನೆಮ್ಮದಿಯಿಂದಿರಲು ನೆರವಾಗುತ್ತದೆ ಎಂದು ನಟಿ ಅದಿತಿ ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಮಾತನಾಡಿ, ಯೋಗ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಐತಿಹಾಸಿಕ ದಿನದ ಪ್ರೇರಕ ಶಕ್ತಿಯಾಗಿದ್ದಾರೆ ಎಂದರು. ಸಾಂಕೇತಿಕ ಯೋಗಾಭ್ಯಾಸದಲ್ಲಿ ಯೋಗಪಟುಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.