ಗುಂಡ್ಲುಪೇಟೆ: ರೈತರು ಸಂಘಟಿತರಾಗುವ ಮೂಲಕ ತಮ್ಮ ಉಳಿವಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.
ಶನಿವಾರ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ರೈತಸಂಘದ ಗ್ರಾಮಘಟಕವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತವಿರೋಧಿ ನೀತಿ ಅನುಸರಿಸುತ್ತಿವೆ. ಅಧಿಕಾರಿಗಳು ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ. ಸಾಲಸೋಲ ಮಾಡಿ ಬೆಳೆದ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿದ್ದರೂ ಅರಣ್ಯ ಇಲಾಖೆ ಅವುಗಳ ನಿಯಂತ್ರಣ ಮಾಡುತ್ತಿಲ್ಲ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಕ್ಕದೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘಟನೆ ಬಲಗೊಳಿಸುವ ಮೂಲಕ ರೈತರಿಗೆ ನ್ಯಾಯ ದೊರಕಿಸಬೇಕಾಗಿದೆ ಎಂದು ಹೇಳಿದರು.
ಮುಖಂಡರಾದ ಷಣ್ಮುಖ ಸ್ವಾಮಿ, ಅಂಬಳೆ ಶಿವಕುಮಾರ್, ಪ್ರಕಾಶ್, ಪಾಪಣ್ಣ, ಸಿದ್ದಲಿಂಗಪ್ಪ, ಲೋಕೇಶ್, ಉಮೇಶ್ ಸೇರಿದಂತೆ ಹಲವರು ಇದ್ದರು.