ಜಿಲ್ಲೆ

ಕೈಗಾರಿಕಾ ಪ್ರದರ್ಶನದಲ್ಲಿ ಕಲ್ಪಿತ ಪ್ರದರ್ಶನ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್‌ಡಿಆರ್‌ಎ್ ವತಿಯಿಂದ ದೊಡ್ಡಬಳ್ಳಾಪುರ ತಾಲೂಕು ಓಬದೇವನಹಳ್ಳಿ 3ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಮುಸಾಶಿ ಆಟೋ ಪಾರ್ಟ್ಸ್ ಇಂಡಿಯಾ ಪ್ರೈವೇಟ್‌ಲಿಮಿಟೆಡ್ ಆವರಣದಲ್ಲಿ ಶುಕ್ರವಾರ ಅ್ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಕಲ್ಪಿತ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ಆ್ಸೈಟ್ ತುರ್ತು ಅಣಕು ಪ್ರದರ್ಶನದಲ್ಲಿ 20 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಎನ್‌ಡಿಆರ್‌ಎ್ ಸಿಬ್ಬಂದಿ, ಅಗ್ನಿಶಾಮಕ ದಳ, 2 ಆಂಬ್ಯುಲೆನ್ಸ್, 7 ಬಸ್‌ಗಳು, ವೈದ್ಯರು, ದಾದಿಯರು, ವೀಕ್ಷಕರು ಮತ್ತು ವಿವಿಧ ಕಾರ್ಖಾನೆಗಳಿಂದ ಸುಮಾರು 100 ಪ್ರತಿನಿಧಿಗಳು ಭಾಗವಹಿಸಿದ್ದರು. ನೈಜರೀತಿಯಲ್ಲಿ ಬಿಂಬಿತವಾದ ಕಲ್ಪಿತ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ ಪ್ರದರ್ಶನದಲ್ಲಿ ಡಿಡಿಎಂಎ ಸಹಾಯದಿಂದ ಪುನರ್ವಸತಿ ಕೇಂದ್ರಗಳಿಗೆ ಮುಸಾಶಿ ಆಟೋ ಪಾರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕೈಗಾರಿಕಾ ಪ್ರದೇಶಕ್ಕೆ ಕಾರ್ಮಿಕರನ್ನು ಸ್ಥಳಾಂತರಿಸಲಾಯಿತು ಮತ್ತು ಪಕ್ಕದ ಕಾರ್ಖಾನೆಯಾದ ಗ್ರೋವರ್ ಜಂರ್ ನಿಯಂತ್ರಣ ಕೊಠಡಿಯಲ್ಲಿ ಡಿ-ಬೀಫಿಂಗ್ ನಡೆಸಲಾಯಿತು.

20 ಕಾರ್ಮಿಕರಿಗೆ ಗಾಯ: ಕಾರ್ಖಾನೆಯ 20 ಕಾರ್ಮಿಕರು ರಾಸಾಯನಿಕ ಸೋರಿಕೆಯಿಂದ ಗಾಯಗೊಂಡರು, ಎನ್‌ಡಿಆರ್‌ಎ್ ತಂಡ ಅವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿತು. ತಕ್ಷಣವೇ ಅವರಿಗೆ ತುರ್ತು ಚಿಕಿತ್ಸೆ ಕೊಡಿಸಲಾಯಿತು. ಈ ರಾಸಾಯನಿಕ ದುರಂತ ಕಲ್ಪಿತ ಪ್ರದರ್ಶನದಿಂದ ಕಾರ್ಖಾನೆಯಲ್ಲಿ 265 ಕ್ಕೂ ಹೆಚ್ಚು ಕಾರ್ಮಿಕರನ್ನು ರಕ್ಷಿಸಿ ದೊಡ್ಡಬಳ್ಳಾಪುರದ ಡಿ ಕ್ರಾಸ್ ಬಳಿಯಿರುವ ಪುನರ್ವಸತಿ ಕೇಂದ್ರಗಳಾದ ಅಂಬೇಡ್ಕರ್ ಭವನ ಮತ್ತು ಸರ್ಕಾರಿ ಬಾಲಕಿಯರ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಯಿತು.

ಇಬ್ಬರು ಕಾರ್ಮಿಕರ ಸಾವು: ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳು ಮತ್ತು ಪ್ರದೇಶದ ಮಾರ್ಗಗಳನ್ನು ಡಿಡಿಎಂಎ ಸಹಯೋಗದೊಂದಿಗೆ ಸುತ್ತುವರಿದು ಸಂಚಾರಸಿಕ್ಕನ್ನು ನಿಯಂತ್ರಿಸಲಾಯಿತು. ಈ ಸಮಯದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಂತೆ ದೃಶ್ಯೀಕರಿಸಲಾಯಿತು, ಸಣ್ಣ-ಪುಟ್ಟ ಗಾಯಗಳಾಗಿರುವ 8 ಕಾರ್ಮಿಕರನ್ನು, ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು. ಅತೀ ಹೆಚ್ಚು ಗಾಯಗಳಾದ ಇಬ್ಬರು ಕಾರ್ಮಿಕರನ್ನು ವಿಕ್ಟೋರಿಯಾ ಮತ್ತು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತು. ಇದಲ್ಲದೆ, ಡ್ರಿಲ್ ಮಾಡುವಾಗ ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳು, ಸಂಪನ್ಮೂಲಗಳ ಅವಶ್ಯಕತೆ, ಕಾರ್ಮಿಕರ ಮತ್ತು ಕಾರ್ಖಾನೆಗಳ ಸುರಕ್ಷತೆ, ಕಾರ್ಖಾನೆ ಸುತ್ತಮುತ್ತಲಿನ ಕಾರ್ಮಿಕರ ಮತ್ತು ಜನಗಳ ಜಾಗರೂಕತೆ ಇತ್ಯಾದಿಗಳ ವಿಷಯಗಳ ಕುರಿತಂತೆ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಭಾಗಿದಾರರಿಂದ ಪಡೆಯಲಾಯಿತು.

ಇದು ಕೇವಲ ಕಲ್ಪಿತ ಪ್ರದರ್ಶನ ಇದು ಕೇವಲ ಕಲ್ಪಿತ ಪ್ರದರ್ಶನವಾಗಿದ್ದು ಎಲ್ಲ ಇಲಾಖೆಗಳು ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು. ಈ ಕಲ್ಪಿತ ಪ್ರದರ್ಶನವನ್ನು ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಜಾಗೃತರಾಗಿರಬೇಕು: ಕೈಗಾರಿಕಾ ಪ್ರದೇಶಗಳಲ್ಲಿ ಸಾಕಷ್ಟು ಬಾರಿ ವಿಪತ್ತುಗಳು ಸಂಭವಿಸುತ್ತಿರುತ್ತವೆ, ಇಂಥ ವೇಳೆ ವಿಪತ್ತುಗಳನ್ನು ಸಮರ್ಥವಾಗಿ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಪ್ರಾಯೋಗಿಕವಾಗಿ ಇಂಥ ಕಲ್ಪಿತ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯಿಷಾ ಆಯೆಷಾ ತಿಳಿಸಿದರು. ಎಲ್ಲ ಕಾರ್ಖಾನೆ ಆಡಳಿತ ಮಂಡಳಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ವಿಪತ್ತು ನಿರ್ವಹಣೆ ಬಗ್ಗೆ ಜಾಗೃತರಾಗಿರಬೇಕು ಎಂದು ತಿಳಿಸಿದರು.