ಹುಬ್ಬಳ್ಳಿ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸಂಭ್ರಮ ವಾಣಿಜ್ಯ ನಗರಿಯಲ್ಲಿ ಮನೆ ಮಾಡಿದೆ. ನಗರದ ದೇವಸ್ಥಾನ, ಸಾರ್ವಜನಿಕ ಸ್ಥಳ ಸೇರಿ ಇತರೆಡೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀರಾಮ ದೇವಸ್ಥಾನ ಹಾಗೂ ಹನುಮಂತ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮ ನಡೆಯುತ್ತಿವೆ.
ಈಗಾಗಲೇ ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಮತಾರಕ ಮಂತ್ರ ಸಹಿತ ಹೋಮ, ಭಜನೆ, ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ದೇವಸ್ಥಾನಗಳಲ್ಲಿ ಶ್ರೀರಾಮನ ಫೋಟೋಗಳನ್ನು ಅಳವಡಿಸಿದ್ದು, ಪೂಜೆ ನಡೆಯುತ್ತಿದೆ.
ಪ್ರಮುಖ ವೃತ್ತಗಳು ಹಾಗೂ ರಸ್ತೆಗಳ ಅಲಂಕಾರ ಕಾರ್ಯ ಭರದಿಂದ ಸಾಗಿದೆ. ಜನತಾ ಬಜಾರ್, ದುರ್ಗದಬೈಲ್, ಬ್ರಾಡ್‌ವೇ, ಮರಾಠಗಲ್ಲಿ ಸೇರಿ ವಿವಿಧ ಮಾರುಕಟ್ಟೆಯಲ್ಲಿ ಬಂಟಿಂಗ್ಸ್, ಕೇಸರಿ ಧ್ವಜ ಕಟ್ಟಿ ಅಲಂಕರಿಸಲಾಗಿದೆ. ಕೆಲವರು ನಗರದಲ್ಲೇ ಧ್ವಜ ಹಾಗೂ ಶಾಲುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರೆ ಕೆಲವರು ಹೊರ ರಾಜ್ಯಗಳಿಂದ ತರಿಸಿ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹುಬ್ಬಳ್ಳಿಯು ಕೇಸರಿಮಯವಾಗಿದೆ.