ಕನಕಗಿರಿಯಲ್ಲಿ ನಡೆದ ಜೂಲುಸ್ ಮೆರವಣಿಗೆಗೆ ಅರಳಹಳ್ಳಿಯ ಗವಿಸಿದ್ದಯ್ಯ ತಾತನವರು ಚಾಲನೆ ನೀಡಿದರು. ಪಿಐ ಎಂ.ಡಿ ಪೈಜುಲ್ಲಾ ಸಮುದಾಯದವರಾದ ಇಮಾಮಸಾಬ ಎಲಿಗಾರ,ಪೀರಸಾಬ ಬೀಡಿ, ಮದರ್ ಸಾಬ ಸಂತ್ರಾಸ್, ನೂರ್ ಅಹ್ಮದ್ ಸಂತ್ರಾಸ್ ಇತರರಿದ್ದರು. 
ಜಿಲ್ಲೆ

ಭಾವೈಕ್ಯ ಮೂಡಿಸಿದ ಹಬ್ಬ

ಗಾಯತ್ರಿ ಮಾಲಿಪಾಟೀಲ್

ಕನಕಗಿರಿ: ಪಟ್ಟಣದಲ್ಲಿ ಇತ್ತೀಚಿಗೆ ಕೋಮು ಸೌಹಾರ್ದತೆಗೆ ಧಕ್ಕೆ ಯಾಗುತ್ತಿರುವ ನಡುವೆ ಶುಕ್ರವಾರ ನಡೆದ ಈದ್ ಮಿಲಾದ್ ಆಚರಣೆ ಭಾವೈಕ್ಯ ಮೂಡಿಸಿದೆ.

ಮೇಲುಗಡೆ ಮಸೀದಿ ಬಳಿ ಆರಂಭವಾದ ಜೂಲುಸ್ ಮೆರವಣಿಗೆಗೆ ಅರಳ ಹಳ್ಳಿಯ ಗವಿಸಿದ್ದಯ್ಯ ತಾತ ನವರು ಚಾಲನೆ ನೀಡಿದರು. ರಾಜಬೀದಿಯಲ್ಲಿ ಪ್ರತಿಷ್ಠಾಪಿಸದ ಗಣೇಶ ಮೂರ್ತಿಗಳಿಗೆ ಮುಸ್ಲಿಂ ಬಾಂಧವರು ಅಕ್ಷತೆ ಅರ್ಪಿಸಿದರು. ಶ್ರೀ ಕನಕಾಚಲ ಪತಿ ದೇವರಿಗೆ ಮಾಲಾರ್ಪಣೆ ಮಾಡಲಾಯಿತು.

ಅರಳಹಳ್ಳಿಯ ಗವಿಸಿದ್ದಯ್ಯ ತಾತನವರು ಮಾತನಾಡಿ, ಮೇಲು, ಕೀಳೆಂಬ ಭಾವನೆಯಿಂದ ಎಲ್ಲರೂ ಹೊರಬರಬೇಕು. ಮೋಸ, ವಂಚನೆ ಮಾಡದೇ ಶರಣರ, ದಾರ್ಶನಿಕರ ಮೌಲ್ಯಗಳನ್ನು ಅರಿತು ಕೈಲಾದ ಸಹಾಯ ಮಾಡೋಣ. ಪ್ರವಾದಿ ಮೊಹಮ್ಮದರು ಮನುಷ್ಯರಾಗಿ ಬಾಳುವಂತೆ ಮನವರಿಕೆ ಮಾಡಿಕೊಟ್ಟಂತೆ ಸೌಹಾರ್ದದಿಂದ ಜೀವಿಸಬೇಕು. ದೇಶದ ವಿಚಾರ ಬಂದಾರ ನಾವು ಭಾರತೀಯರು ಎನ್ನುವುದನ್ನು ಮರೆಯಬಾರದು ಎಂದರು. ಯುವಕರು ಡಿಜೆ ಸೌಂಡಿಗೆ ಕುಣಿದು ಸಂಭ್ರಮಿಸಿದರು. ಅರಬ್ಬಿ ಶಾಲೆಯ ಚಿಕ್ಕಮಕ್ಕಳು ಭಾಗವಹಿಸಿ ಮೆರವಣಿಗೆಗೆ ಶೋಭೆ ತಂದರು. ನಂತರ ಅನ್ನಸಂತರ್ಪಣೆ ನಡೆಯಿತು.

ಪಪ ಅಧ್ಯಕ್ಷೆ ಹುಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠೀರಂಗಪ್ಪ ನಾಯಕ್, ಜಶ್ನೇ-ಈದ್-ಮಿಲಾದ್ ಕಮೀಟಿ ಅಧ್ಯಕ್ಷ ಹಾಜಿ ಬಾಬುಸಾಬ್ ಸುಳೇಕಲ್, ಪಂಚ ಕಮೀಟಿ ಅಧ್ಯಕ್ಷ ಗೌಸುಸಾಬ್ ಗುರಿಕಾರ, ಮಾಜಿ ಅಧ್ಯಕ್ಷ ಮಹ್ಮದ್‌ಸಾಬ್ ಅಗರಬತ್ತಿ, ಮಾಜಿ ತಾಪಂ ಅಧ್ಯಕ್ಷ ಹೊನ್ನುರಸಾಬ್ ಮೇಸ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತ್ ಮುಜಾವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ಸ್ವಾಮಿ, ಮಾಜಿ ಜಿಪಂ ಸದಸ್ಯ ವೀರೇಶ ಸಮಗಂಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಮುಖ ವಾಗೇಶ್ ಹರೇಮಠ, ಪಿಐ ಎಂ.ಡಿ.ಪೈಜುಲ್ಲಾ ಇತರರಿದ್ದರು.