ಜಿಲ್ಲೆ

ಶ್ರೀಶಮಿಗಿರಿ ಕ್ಷೇತ್ರದಲ್ಲಿ ವೈಭವದ ಉತ್ಸವ

ಶಾಸ್ತ್ರೋಸ್ತವಾಗಿ ಬನ್ನಿಮಂಟಪಕ್ಕೆ ಪೂಜೆ ಸಲ್ಲಿಸಿದ ತಹಸೀಲ್ದಾರ್

ನೆಲಮಂಗಲ: ನಗರದ ಬಸವನಹಳ್ಳಿಯ ಶ್ರೀಶಮಿಗಿರಿ ಕ್ಷೇತ್ರ, ಕೌಂಡಿನ್ಯಾಶ್ರಮವೆಂದೆ ಪ್ರಸಿದ್ದಿಯಾಗಿರುವ ಅಮಕಲ್ ದಿಣ್ಣೆಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವರ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ವಿಜಯದಶಮಿ ಶನಿವಾರ ಜಂಬೂಸವಾರಿ ಹಿನ್ನೆಲೆಯಲ್ಲಿ ಶಮಿಗಿರಿ ಕ್ಷೇತ್ರಕ್ಕೆ ಆಗಮಿಸಿದ್ದ ತಹಸೀಲ್ದಾರ್ ಅಮೃತ್‌ಆತ್ರೇಶ್ ಕುಟುಂಬದೊಂದಿಗೆ ಶಾಸ್ತ್ರೋಸ್ತವಾಗಿ ಬನ್ನಿಮಂಟಪಕ್ಕೆ ಪೂಜೆ ಸಲ್ಲಿಸಿದರು. ಪ್ರತಿವರ್ಷದಂತೆ ಅಹಿಂಸಾ ಧ್ಯೋತಕವಾಗಿ ಮೊಲಕ್ಕೆ ಚಿನ್ನದ ಓಲೆ ಚುಚ್ಚಿ ಕಾಡಿಗೆ ಬಿಟ್ಟಿದ್ದು ವಿಶೇಷವಾಗಿತ್ತು.


ನಾಡಹಬ್ಬ ದಸರಾ ಕನ್ನಡಿಗರ ಶೌರ್ಯದ ಸಂಕೇತವಾಗಿದೆ. ಗ್ರಾಮಗಳಲ್ಲಿ ನಡೆಯುವ ಪೂಜೆ ಮತ್ತು ಧಾರ್ಮಿಕಾಚರಣೆಗಳು ಸೌಹಾರ್ದತೆ ಬೆಳೆಸುತ್ತದೆ ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್ ತಿಳಿಸಿದರು.
ಒತ್ತುವರಿ ತೆರವು: ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯ ಸ.ನಂ 5ರಲ್ಲಿ ಸುಮಾರು 6.20ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಅಮಕಲ್ ದಿಣ್ಣೆಯಿದ್ದು ಕೆಲವರು ಒತ್ತುವರಿ ಮಾಡಿಕೊಂಡಿದ್ದನ್ನು ತೆರವು ಮಾಡಲಾಗಿದೆ. ದೇವಾಲಯಕ್ಕೆ ಜಮೀನು ಹಸ್ತಾಂತರಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್ ಮಾಹಿತಿ ನೀಡಿದರು.


ರಾಜಸ್ವ ನಿರೀಕ್ಷ ರಘುಪತಿ, ಗ್ರಾಮಲೆಕ್ಕಾಧಿಕಾರಿ ಮಾರುತಿ, ಅರ್ಚಕರಾದ ಡಿ.ನಾರಾಯಣಭಟ್, ಶ್ರೀನಿವಾಸಚಾರ್ಯ, ಕರವೇ ರಾಜ್ಯ ಉಪಾಧ್ಯಕ್ಷ ಜಿ.ಉಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಸ್ಟುಡಿಯೋಮಂಜುನಾಥ್, ಗೊಲ್ಲಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಜಗದಾಂಭ ಪುಟ್ಟಸ್ವಾಮಿ, ವಕೀಲ ನಾಗೇಶ್, ದೇವಾಲಯ ಮುಖಂಡ ಪುಟ್ಟಸ್ವಾಮಿ, ಮಂಜುನಾಥ್, ನರಸಿಂಹರಾಜು, ಜಯನಗರ ಮಾರುತಿ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಮೆರವಣಿಗೆ, ವಿಶೇಷ ಪೂಜೆ
ದಸರಾ ಹಬ್ಬದ ಪ್ರಯುಕ್ತ ಮೈಲನಹಳ್ಳಿ ವೀರಾಂಜನೇಯ ಹಾಗೂ ಬಸವನಹಳ್ಳಿಯ ವೆಂಕಟರಮಣಸ್ವಾಮಿ ದೇವರಗಳ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಶಮಿಗಿರಿ ಕ್ಷೇತ್ರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಬನ್ನಿಪತ್ರೆ ವಿತರಣೆ
ಬನ್ನಿ ಪತ್ರೆ ಕೊಟ್ಟು ಒಂದು ಒಳ್ಳೆ ಮಾತಾಡಿ ಎನ್ನುವ ಹಳ್ಳಿಗರ ಮಾತಿನಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಸಮ್ಮುಖದಲ್ಲಿ ಬನ್ನಿ ಮರಕ್ಕೆ ಪೂಜೆಸಲ್ಲಿಸಿ ಕತ್ತರಿಸಿಲಾಯಿತು. ಬನ್ನಿ ಪತ್ರೆಯನ್ನು ಗ್ರಾಮಸ್ಥರು ಪರಸ್ಪರ ಹಂಚಿ ಹಬ್ಬದ ಶುಭಾಶಯ ಕೋರಿದರು.

ಎಲ್ಲ ದೇಗುಲಗಳಲ್ಲಿ ಪೂಜೆ
ನಾಡ ಹಬ್ಬ ವಿಜಯದಶಮಿಯ ಪ್ರಯುಕ್ತ ನೆಲಮಂಗಲ ನಗರ ಸೇರಿ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ನಗರದ ಪೇಟೆಯಲ್ಲಿನ ರಾಜರಾಜೇಶ್ವರಿ, ಭುವನೇಶ್ವರಿ, ಕನ್ನಿಕಾ ಪರಮೇಶ್ವರಿ, ಮಾರಮ್ಮ ಸೇರಿ ಕಾಲನಿ ಬಳಿಯ ಚೌಡೇಶ್ವರಿ ದೇವಾಲಗಳಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ನೆರವೇರಿದವು. ಶನಿವಾರ ಮುಂಜಾನೆಯಿಂದ ದೇವಾಲಯಗಳ ಮುಂದೆ ಸಾಲಿನಲ್ಲಿ ನಿಂತ ಮುತ್ತೈದೆಯರು, ಯುವತಿಯರು ಮತ್ತು ಮಕ್ಕಳು ಆದಿಶಕ್ತಿ ಜಗದಾಂಬೆಗೆ ನಮಿಸಿದರು.