ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೈಬರ್ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆದ ಹಣದೊಂದಿಗೆ ತನಿಖಾ ತಂಡದ ಸದಸ್ಯರು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ ಮತ್ತಿತರರಿದ್ದಾರೆ.  
ಜಿಲ್ಲೆ

ಕೈ ಸೇರಿತು ಕಳೆದು ಹೋದ ಹಣ, ಆನಂದ ಭಾಷ್ಪ ಸುರಿಸಿದ ರಾಜಕನ್ಯಾ, ಕಣ್ಣಾಲೆ ತೇವ-ಖಾಕಿ ಬಗ್ಗೆ ಹೆಚ್ಚಿದ ಕೃತಜ್ಞತೆ ಭಾವ

ವಿಜಯಪುರ: ಡಿಜಿಟಲ್ ಅರೆಸ್ಟ್, ಕ್ರಿಪ್ಟೋ ಟ್ರೇಡಿಂಗ್, ಷೇರ್ ಮಾರ್ಕೆಟಿಂಗ್, ಪಾರ್ಟ್ ಟೈಮ್ ಜಾಬ್‌ನಂಥ ವಿವಿಧ ರೀತಿಯ ಪ್ರಕರಣಗಳಲ್ಲಿ ಹಣ ಕಳೆದುಕೊಂಡ ಜನಸಾಮಾನ್ಯರಿಗೆ ಮರಳಿ ಹಣ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಫಲವಾಗಿದೆ.

ಕಳೆದು ಹೋದ ಹಣ, ಮೊಬೈಲ್ ಮತ್ತಿತರ ಬೆಲೆ ಬಾಳುವ ವಸ್ತುಗಳು ಕೈ ಸೇರುತ್ತಿದ್ದಂತೆ ಆನಂದ ಬಾಷ್ಪ ಸುರಿಸಿದ ನೊಂದ ಜೀವಗಳು ಖಾಕಿ ಪಡೆಯ ಕಾರ್ಯಕ್ಕೆ ಮೆಚ್ಚುಗೆ ಸುರಿಸಿದ್ದಲ್ಲದೇ ಕೃತಜ್ಞತೆಗಳ ಮಹಾಪೂರ ಹರಿಸಿದ ವಿನೂತನ ಸನ್ನಿವೇಶಕ್ಕೆ ಬುಧವಾರ ಇಲ್ಲಿನ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಾಕ್ಷಿಯಾಯಿತು.

ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ದಾಖಲಾಗಿರುವ ವಂಚನೆ ಪ್ರಕರಣಗಳು, ಕೈಗೊಂಡ ತನಿಖೆ, ವಶಕ್ಕೆ ಪಡೆದ ಹಣ, ಬಂಧಿತರ ವಿವರಗಳ ಕುರಿತು ಸುದ್ದಿಗೋಷ್ಠಿ ಮೂಲಕ ಇಂಚಿಂಚಾಗಿ ವಿವರಿಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ, ದಾಖಲಾದ ಒಟ್ಟು 12 ಪ್ರಕರಣಗಳ ಪೈಕಿ ನಾಲ್ಕು ಪ್ರಮುಖ ಪ್ರಕರಣಗಳಲ್ಲಿ ಒಟ್ಟು 1.47 ಕೋಟಿ ರೂಪಾಯಿ ಮರಳಿ ಕೊಡಿಸಿರುವುದಾಗಿ ಹೆಮ್ಮೆಯಿಂದ ತಿಳಿಸಿದರು. ಮುಂದುವರಿದು ಇನ್ನಷ್ಟು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಜೊತೆಗೆ ಸಾರ್ವಜನಿಕರಲ್ಲಿ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದರು.

ಪ್ರಕರಣಗಳ ವಿವರ

ವಿಜಯಪುರ ನಗರದ ಸೃಷ್ಟಿ ಕಾಲನಿಯ ನಿವಾಸಿ ಶೈಲಜಾ ಶಿವಲಿಂಗಸ್ವಾಮಿ ಮುತ್ತಿನಪೆಂಡಿಮಠ ಇವರನ್ನು ಡಿಜಿಟಲ್ ಅರೆಸ್ಟ್ ಮಾಡಿ 38 ಲಕ್ಷ ರೂಪಾಯಿ ವಂಚಿಸಲಾಗಿತ್ತು. ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ ಒಟ್ಟು 31,52,581 ರೂ. ಗಳನ್ನು ಶೈಲಜಾಗೆ ಮರಳಿ ಕೊಡಿಸಿದ್ದಾಗಿ ಎಸ್‌ಪಿ ನಿಂಬರಗಿ ತಿಳಿಸಿದರು.

ತಾಳಿಕೋಟಿ ಪಟ್ಟಣದ ನಿವಾಸಿ ರಾಜಕನ್ಯಾ ಬಸವರಾಜ ಕೊಂಗಂಡಿ ಇವರಿಗೆ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವ ಆಮಿಷ ತೋರಿಸಿ 87 ಲಕ್ಷ ರೂಪಾಯಿ ವಂಚಿಸಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿ ಅವರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು 68,25,710 ರೂ. ಗಳನ್ನು ಮರಳಿ ಕೊಡಿಸಲಾಗಿದೆ.

ಸಿಂದಗಿಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ಮಾರ್ಕೆಟ್ ಬೆಲೆಗಿಂತ ಕಡಿಮೆ ದರದಲ್ಲಿ ಷೇರ್‌ಗಳನ್ನು ನೀಡುವುದಾಗಿ ನಂಬಿಸಿ ಇವರ ಕಡೆಯಿಂದ 1 ಕೋಟಿ ಹಣ ಹಾಕಿಸಿಕೊಂಡು ವಂಚನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕೃತ್ಯ ಎಸಗಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ ಒಟ್ಟು 9,97,762ರೂ. ಗಳನ್ನು ಮರಳಿ ಕೊಡಿಸಿದ್ದು, ಇನ್ನ್ನುಳಿದ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಅಲ್ಲದೇ, ವಿಜಯಪುರ ನಗರದ ನಿಖಿಲ ಶಿವಾನಂದ ಮೋಜಿ ಇವರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ 2 ಕೋಟಿ ರೂಪಾಯಿ ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ 38 ಲಕ್ಷ ರೂಪಾಯಿ ವಾಪಸ್ ಕೊಡಿಸಲಾಗಿದೆ. ಹೀಗೆ ನಾಲ್ಕು ಪ್ರಕರಣಗಳಲ್ಲಿ ಒಟ್ಟು 1,47,76,053 ರೂ. ಗಳನ್ನು ಮರಳಿ ಕೊಡಿಸುವಲ್ಲಿ ಸಫಲರಾಗಿದ್ದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ವಿವರಿಸಿದರು.

ಮುಂದುವರಿದು ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಂದಾಜು 3,44,000 ರೂ. ಮೌಲ್ಯದ ವಿವಿಧ ಕಂಪನಿಯ ಒಟ್ಟು 20 ಮೋಬೈಲ್‌ಗಳನ್ನು ಪತ್ತೆ ಮಾಡಲಾಗಿದೆ ಎಂದರಲ್ಲದೇ ಅವುಗಳನ್ನು ವಾರಸುದಾರರಿಗೆ ಒಪ್ಪಿಸಿದರು.

ತನಿಖಾ ತಂಡದ ಕಾರ್ಯಕ್ಕೆ ಮೆಚ್ಚುಗೆ

ವಂಚನೆ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡುವಲ್ಲಿ ಸಫಲರಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಸೈಬರ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಎಎಸ್‌ಪಿಗಳಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದರು.

ಅಲ್ಲದೇ, ಸೈಬರ್ ಅಪರಾಧಗಳನ್ನು ತಡೆಯಲು ಕೈಗೊಂಡ ಕ್ರಮಗಳ ಜೊತೆಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಸುರಕ್ಷತೆ ಕುರಿತು ವಿವರಿಸುತ್ತಾ, ಜನಸಾಮಾನ್ಯರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಆನ್‌ಲೈನ್ ಕರೆಗಳ ಬಗ್ಗೆ ಜಾಗೃತಿ ವಹಿಸಬೇಕು. ‘ಆಸೆಯೇ ದುಃಖಕ್ಕೆ ಕಾರಣ-ದುರಾಸೆಯೇ ಮೋಸಕ್ಕೆ ಕಾರಣ’ ಎಂಬುದನ್ನು ಅರಿಯಬೇಕೆಂದರು.

ಎಎಸ್‌ಪಿಗಳಾದ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ ಮತ್ತಿತರರಿದ್ದರು.