ಜಿಲ್ಲೆ

ಕಲಿಕೆಯಲ್ಲಿ ಹಿಂದುಳಿದಿದ್ದಾನೆ ಎಂಬ ಕಾರಣಕ್ಕೆ 14 ವರ್ಷದ ಮಗನನ್ನು​ ಬ್ಯಾಟ್​​​​​​​​ನಿಂದ ಹೊಡೆದು ಕೊಂದ ತಂದೆ | Disobedient Student

Disobedient Student : ಕಲಿಕೆಯಲ್ಲಿ ಹಿಂದುಳಿದಿದ್ದಾನೆ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ 14 ವರ್ಷದ ಮಗನನ್ನೇ ಬ್ಯಾಟ್​ನಿಂದ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ ದಕ್ಷಿಣ ಕೆಎಸ್ ಲೇಔಟ್‌ನಲ್ಲಿರುವ ಕೃಷ್ಣನಗರದಲ್ಲಿ ನಡೆದಿದೆ.

ಮೃತ ಮಗನನ್ನು ತೇಜಸ್​ ಎಂದು ಗುರುತಿಸಲಾಗಿದೆ. ಆತನ ತಂದೆ ರವಿಕುಮಾರ್​ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಹೀಗಿದೆ:

ಪೊಲೀಸರ ಪ್ರಕಾರ ಆರೋಪಿ ರವಿಕುಮಾರ್ ಅಪರಾಧವನ್ನು ಮುಚ್ಚಿಹಾಕಲು ಮಗನ ಅಂತ್ಯಕ್ರಿಯೆಯನ್ನು ನಡೆಸಲು ಮುಂದಾಗಿದ್ದ. ಅಲ್ಲದೆ, ಅನಾರೋಗ್ಯದಿಂದ ತೇಜಸ್ ಸಾವಿಗೀಡಾಗಿದ್ದಾನೆ ಎಂದು ಸಂಬಂಧಿಗಳು ಮತ್ತು ನೆರೆಹೊರೆಯವರಿಗೆ ನಂಬಿಸಿದ್ದ. ಆದರೆ, ತೇಜಸ್‌ನ ತಾಯಿ ಶಶಿಕಲಾ, ಮಗನ ಸಾವಿನ ಕುರಿತು ಅನುಮಾನಗೊಂಡು, ಪೊಲೀಸರಿಗೆ ತಿಳಿಸಲು ನೆರೆಹೊರೆಯವರ ಸಹಾಯ ಕೇಳಿದ್ದಳು. ಕೊನೆಗೂ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದ ನಂತರ ಆರೋಪಿ ರವಿಕುಮಾರ್​ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ. ಇದೀಗ ಆತನ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ತಾಯಿ ಶಶಿಕಲಾ ಹೇಳಿದ್ದೇನು?

ಶಶಿಕಲಾ ಪ್ರಕಾರ, ತೇಜಸ್ ಆಟವಾಡಲು ಬಳಸುತ್ತಿದ್ದ ಮೊಬೈಲ್ ಫೋನ್ ರಿಪೇರಿ ಮಾಡುವಂತೆ ತಂದೆಯನ್ನು ಒತ್ತಾಯಿಸಿದ್ದ. ಇದರಿಂದ ರವಿಕುಮಾರ್ ಕೋಪಗೊಂಡರು. ಅಲ್ಲದೆ, ತೇಜಸ್‌ ಸರಿಯಾಗಿ ಕ್ಲಾಸ್​​​ಗೆ ಹೋಗುತ್ತಿಲ್ಲ, ಇದರಿಂದ ಆತ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾನೆ ಎಂದು ಅಸಮಾಧಾನಗೊಂಡಿದ್ದರು. ಶುಕ್ರವಾರ ಬೆಳಿಗ್ಗೆ ತೇಜಸ್, ಮೊಬೈಲ್ ಫೋನ್ ಅನ್ನು ಸರಿಮಾಡಿಸಿ ಕೊಡುವಂತೆ ಮತ್ತೆ ಒತ್ತಾಯಿಸಿದ್ದಾನೆ. ಈ ಸಮಯದಲ್ಲಿ ನನ್ನ ಗಂಡ ತನ್ನ ಮರಗೆಲಸದಲ್ಲಿ ಬಳಸಿದ ಮರದ ದಿಮ್ಮಿಯನ್ನು ತೆಗೆದುಕೊಂಡು ತೇಜಸ್‌ಗೆ ಥಳಿಸಿದರು. ಅಲ್ಲದೆ, ಅಲ್ಲಿಯೇ ಇದ್ದ ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು, ತಲೆಯನ್ನು ಗೋಡೆಗೆ ಗುದ್ದಿದರು ಎಂದು ಶಶಿಕಲಾ ಕೆಎಸ್‌ ಲೇಔಟ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತೇಜಸ್​ ಮೇಲೆ ಹಲ್ಲೆ ಮಾಡಿದ ಬಳಿಕ ರವಿಕುಮಾರ್ ತನ್ನ ಕೆಲಸದ ಕಾರಣ ಹೊರಗೆ ಹೋಗಿದ್ದರು. ಇತ್ತ ತೇಜಸ್ ಮಲಗಲು ಹೋಗಿ ಅಲ್ಲೇ ಪ್ರಜ್ಞೆತಪ್ಪಿ ಬಿದ್ದನು. ಮಧ್ಯಾಹ್ನದ ವೇಳೆಗೆ ಶಶಿಕಲಾ ಮಗನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಳು. ಸ್ವಲ್ಪ ಸಮಯದ ನಂತರ ರವಿಕುಮಾರ್ ಕೂಡ ಆಸ್ಪತ್ರೆಗೆ ಬಂದರು. ಅಲ್ಲಿ ತೇಜಸ್ ಕೊನೆಯುಸಿರೆಳೆದಿದ್ದನು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.