ಸವಣೂರ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಛಾವಣಿ ಕುಸಿದು ಅವಳಿ ಮಕ್ಕಳು, ಮಹಿಳೆ ಮೃತಪಟ್ಟಿದ್ದು, ಮೂವರು ಗಾಯಗೊಂಡ ಟನೆ ತಾಲೂಕಿನ ಮಾದಾಪೂರ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
18 ತಿಂಗಳ ಕೂಸುಗಳಾದ ಅಮೂಲ್ಯ, ಅನುಶ್ರೀ ಮತ್ತು ಮಕ್ಕಳ ಅತ್ತೆ ಚನ್ನಮ್ಮ ದೊಡ್ಡಬಸಪ್ಪ ಹರಕುಣಿ (40) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮನೆ ಮಾಲೀಕ ಮುತ್ತಪ್ಪ ದೊಡ್ಡಬಸಪ್ಪ ಹರಕುಣಿ (35), ಪತ್ನಿ ಸುನೀತಾ ಮುತ್ತಪ್ಪ ಹರಕುಣಿ (28) ಗಾಯಗೊಂಡು ಸವಣೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಗಾಯಗೊಂಡ ತಾಯಿ ಯಲ್ಲಮ್ಮ ದೊಡ್ಡಬಸಪ್ಪ ಹರಕುಣಿ (60) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಉಪ ವಿಭಾಗಾಧಿಕಾರಿ ಮಹಮ್ಮದ ಖಿಜರ್, ತಹಸೀಲ್ದಾರ್ ಭರತರಾಜ್ ಕೆ.ಎನ್. ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ಶವವನ್ನು ಕಂಡು ಜಿಲ್ಲಾಧಿಕಾರಿ ಭಾವುಕರಾದರು. ಗಾಯಾಳುಗಳಿಗೆ ಸಾಂತ್ವನ ಹೇಳಿದರು. ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ ಅವರಿಂದ ಮಾಹಿತಿ ಪಡೆದು, ಸೂಕ್ತ ಚಿಕಿತ್ಸೆಗೆ ಸಲಹೆ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಹಳೆಯ, ಶಿಥಿಲಗೊಂಡ ಮನೆಗಳಲ್ಲಿ ವಾಸಿಸುವವರ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಕುಟುಂಬಸ್ಥರ ರೋದನ
ಅತ್ತೆಯೊಂದಿಗೆ ಮಲಗಿದ್ದ ಅವಳಿ ಮುದ್ದು ಕಂದಮ್ಮಗಳನ್ನು ನೆನೆದು ಹರಕುಣಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮುತ್ತಪ್ಪನ ಪಾಲಿಗೆ ಹಳೆಯ ಮೇಲ್ಮುದ್ದಿ ಮನೆ ಬಂದಿತ್ತು. ಮಣ್ಣಿನ ಮನೆಯಾಗಿದ್ದರಿಂದ ರಣೆಗಾಗಿ ತಾಡಪತ್ರಿ ಹೊಚ್ಚಿದ್ದ. ಸತತ ಸುರಿದ ಮಳೆಯಿಂದಾಗಿ ಛಾವಣಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರ ಹಾಕದಿದ್ದರಿಂದ ಅವಡ ಸಂಭವಿಸಿದೆ ಎನ್ನಲಾಗುತ್ತಿದೆ.