ಜಿಲ್ಲೆ

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗಮನ ಸೆಳೆದ ಫ್ಯಾಷನ್ ಶೋ

ಮೈಸೂರು: ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಹಾರ ಮೇಳ ಹಾಗೂ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿನಿಯರು ವಿವಿಧ ಥೀಮ್‌ನಲ್ಲಿ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರು ದೇಶದ ವಿವಿಧ ಸಂಸ್ಕೃತಿಯವರ ವೇಷಭೂಷಣವನ್ನು ತೊಟ್ಟು ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ಗಮನ ಸೆಳೆದರು.

ಅಲ್ಲೆಜಿಸ್ ಗ್ಲೋಬಲ್ ಸಲ್ಯೂಷನ್ ಸಂಸ್ಥೆಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ಲೇಖನ ಮೋಹನ್ ಮಾತನಾಡಿ, ವಿದ್ಯಾರ್ಥಿ ಗಳ ಮುಂದೆ ಸಾಕಷ್ಟು ಅವಕಾಶಗಳು ಇದ್ದು, ಅದನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಜೆಎಸ್‌ಎಸ್ ವಿದ್ಯಾಸಂಸ್ಥೆಯು ಶೈಕ್ಷಣಿಕ ಚಟುವಟಿಕೆಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಫ್ಯಾಷನ್ ಶೋನಲ್ಲಿ ‘ಮಿಸ್ ಜೆಎಸ್‌ಎಸ್ ಪಿಯು’ ವಿಜೇತರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಎಲ್. ಸಿಂಚನಾ ಆಯ್ಕೆಗೊಂಡರು. ವಾಣಿಜ್ಯ ವಿಭಾಗದ ಆರ್.ಎಂ. ದಿಶಾ ರನ್ನರ್‌ಅಪ್ ಪಡೆದರು.

ಕಾರ್ಯಕ್ರಮದಲ್ಲಿ ಆ್ಯಪ್ ಡೆವಲಪ್ಮೆಂಟ್ ಅನಲಿಸ್ಟ್ ವೈ.ಜಿ. ಯೋಗಿತಾ, ಪ್ರಾಂಶುಪಾಲೆ ಎಂ.ಪಿ.ರಾಜೇಶ್ವರಿ , ಸಂಚಾಲಕರಾದ ಶ್ವೇತಾ, ಎ.ಎಂ. ಮಂಜುಳಾ, ಜ್ಯೋತಿ ಪ್ರಕಾಶ್, ಎಂ.ಎನ್. ಪುಷ್ಪಲತಾ, ಎಚ್.ಬಿ.ಶ್ರೀಧರ್ ಹಾಗೂ ಇತರರು ಇದ್ದರು.

ಗಮನ ಸೆಳೆದ ಆಹಾರ ಮೇಳ: ಪಾನಿಪುರಿ, ಚುರುಮುರಿ ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ತಿನಿಸು. ತಮಗೆ ಇಷ್ಟವಾದ ತಿಂಡಿ ತಿನಿಸು ತಿನ್ನಲು ಜೆಎಸ್‌ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಅಂಗಡಿಯತ್ತ ಮುಖ ಮಾಡಲಿಲ್ಲ. ಕಾಲೇಜಿನಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ತಾವೇ ಪಾನಿಪುರಿ, ಚುರುಮುರಿ ಮುಂತಾದ ತಿಂಡಿ ತಿನಿಸು ತಯಾರಿಸಿ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.

ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿತ್ತು. ಒಟ್ಟು 35 ಸ್ಟಾಲ್ ಗಳನ್ನು ತೆರೆಯಲಾಗಿತ್ತು. ವಿದ್ಯಾರ್ಥಿನಿಯರು ಉತ್ಸಾಹದಿಂದ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಮಳಿಗೆ ತೆರೆದು ವ್ಯಾಪಾರ ವಹಿವಾಟು ನಡೆಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಸಹಪಾಠಿಗಳು, ಪ್ರಾಧ್ಯಾಪಕರು ಹಾಗೂ ಅತಿಥಿಗಳು ಗ್ರಾಹಕರಾಗಿದ್ದರು. ಸಾಕಷ್ಟು ವಿದ್ಯಾರ್ಥಿನಿಯರು ತಿಂಡಿ ತಿನಿಸು ಖರೀದಿಸುವ ಮೂಲಕ ಪ್ರೋತ್ಸಾಹಿಸಿದರು. ಆಹಾರ ಮೇಳದಲ್ಲಿ ಬಹುತೇಕ ವಿದ್ಯಾರ್ಥಿನಿಯರು ಚುರುಮುರಿ ಹಾಗೂ ಪಾನಿಪುರಿ ಮಳಿಗೆಯನ್ನು ತೆರಿದಿದ್ದರು. ಕೆಲವು ವಿದ್ಯಾರ್ಥಿಗಳು ಸ್ಯಾಂಡವಿಚ್, ಫ್ರೂಟ್ ಸಲಾಡ್, ಐಸ್‌ಕ್ರೀಂ, ಫ್ರೆಂಚ್‌ಫ್ರೈಸ್ ಸೇರಿದಂತೆ ವಿವಿಧ ತಿಂಡಿಗಳನ್ನು ಮಾರಾಟ ಮಾಡಿದರು