ಜಿಲ್ಲೆ

ಬತ್ತಿ ಹೋದ ಕೊಳವೆ ಬಾವಿ, ಕಬ್ಬಿನ ಹೊಲ ನಾಶಪಡಿಸಿದ ರೈತ

Haveri - Desk - Ganapati Bhat

ಬ್ಯಾಡಗಿ: ಜೂನ್ ತಿಂಗಳು ಮುಗಿಯುತ್ತ ಬಂದರೂ ಮುಂಗಾರು ಮಳೆರಾಯನ ಆಗಮನದ ಮುನ್ಸೂಚನೆ ಕಾಣುತ್ತಿಲ್ಲ. ಬ್ಯಾಡಗಿ ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯಾದ್ಯಂತ ನದಿ, ಕೆರೆ ಕಟ್ಟೆಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಹಿರೇಹಳ್ಳಿ ಗ್ರಾಮದ ರೈತನೊಬ್ಬ ಕಬ್ಬಿನ ಗದ್ದೆಗೆ ನೀರು ಹಾಯಿಸಲಾಗದೆ ಟ್ರ್ಯಾಕ್ಟರ್ ಮೂಲಕ ನಾಶ ಪಡಿಸದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಹಿರೇಹಳ್ಳಿ ಗ್ರಾಮದ ನೀಲಪ್ಪ ಬಸವಣ್ಣೆಪ್ಪ ಹಿರೇಹಳ್ಳಿ ರೈತ ಹೊಗಳಿಗೆ ನೀರುಣಿಸುತ್ತಿದ್ದ ಎರಡು ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಮುಂಗಾರು ಮಳೆಯೂ ವಿಫಲಗೊಂಡು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆಸಿದ್ದ 3 ಎಕರೆ ಕಬ್ಬಿನ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಇದರಿಂದ ಬೇಸರಗೊಂಡ ರೈತ ಬಸವಣ್ಣೆಪ್ಪ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾನೆ. ನೀರಿಗಾಗಿ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಇದ್ದ ಇರಡೂ ಬೋರ್​ವೆಲ್​ಗಳು ನೀರಿಲ್ಲದೆ ಬಿತ್ತಿ ಹೋಗಿವೆ. ಅನಿವಾರ್ಯವಾಗಿ ಬೆಳೆ ನಾಶಪಡಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ರೈತ ಬಸವಣ್ಣೆಪ್ಪ ತಿಳಿಸಿದರು.