ತಾಳಗುಪ್ಪ ಸಮೀಪದ ಗೋಣೂರಿನಲ್ಲಿ ಕಳೆನಾಶಕದಿಂದ ನಾಶವಾದ ಗದ್ದೆ  
ಜಿಲ್ಲೆ

ಗದ್ದೆಗೆ ಕಳೆನಾಶಕ ಸಿಂಪಡಿಸಿದ ರೈತ

Shivamogga - Desk - Praveena Kumar S

ತಾಳಗುಪ್ಪ: ಅನ್ನದಾತೋ ಸುಖೀಭವ, ಉಳುವ ಯೋಗಿಯ ನೋಡಲ್ಲಿ… ಹೀಗೆಲ್ಲ ರೈತಾಪಿ ವೃತ್ತಿಗಳಿಗೆ ಹತ್ತಾರು ಗೌರವವಿದೆ. ಆದರೆ ವಾಸ್ತವದಲ್ಲಿ ರೈತರ ಸಂಕಷ್ಟ ಮಿತಿ ಮೀರಿದೆ. ವಾತಾವರಣದ ಏರುಪೇರಿನಿಂದಾಗುವ ಅನಾಹುತವನ್ನು ಹೊರತುಪಡಿಸಿ ರಾಸಾಯನಿಕಗಳ ಬಳಸುವಾಗ ನಡೆಯುವ ಅಜ್ಞಾನದಿಂದಲೂ ನಷ್ಟಕ್ಕೆ ರೈತರು ತುತ್ತಾಗುತ್ತಿದ್ದಾರೆ. ಅಂತಹ ಒಂದು ಘಟನೆ ತಾಳಗುಪ್ಪ ಸಮೀಪ ಗೊಣೂರಿನಲ್ಲಿ ಬೆಳಕಿಗೆ ಬಂದಿದೆ.
ಕೆರಿಯಪ್ಪ ಎನ್ನುವ ರೈತ ಒಂದೂವರೆ ಎಕರೆ ಭತ್ತ ನಾಟಿ ಮಾಡಿದ್ದರು. ಮಳೆ ಇಲ್ಲದಿದ್ದರೂ ನೀರಿನ ಕೊರತೆ ಇಲ್ಲದ ಕಾರಣ ಸಸಿಗಳು ಹಸಿರಾಗಿದ್ದವು. ಆದರೆ ಹುಳುಗಳು ಬಿದ್ದಿದ್ದವು. ಹಾಗಾಗಿ ರೈತ ಔಷಧ ಸಿಂಪಡಿಸಿದ್ದಾರೆ. ಆದರೆ ಅನಾಹುತವಾಗಿದ್ದು ಇಲ್ಲಿಯೇ. ಕೀಟನಾಶಕ ಔಷಧ ಎಂದು ತಿಳಿದು ಕಳೆನಾಶಕ ಸಿಂಪಡಿಸಿದ್ದಾರೆ. ಮಾರನೇ ದಿನ ಗದ್ದೆ ನೋಡಿದರೆ ಬೆಳೆದ ಸಸಿಗಳು ಸಂಪೂರ್ಣ ಒಣಗಿ ಹೋದಾಗಲೆ ತಿಳಿದ್ದಿದ್ದು ಸಿಂಪರಣೆಯಾಗಿದ್ದು ಹುಳ ಕೊಲ್ಲುವ ರಾಸಾಯನಿಕ ಅಲ್ಲ, ಕಳೆ ಕೊಲ್ಲುವ ನಾಶಕ ಎಂದು. ಆದರೆ ಈ ಸ್ವಯಂಕೃತ ಅಪರಾಧಕ್ಕೆ ಯಾವುದೇ ವಿಮೆ ಲಾಗೂ ಆಗದ ಕಾರಣ ಹತಾಶೆಯೊಂದೇ ದಾರಿಯಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಈ ಬಗ್ಗೆ ರೈತ ಅಳಲು ತೋಡಿಕೊಂಡರೂ ಅವರು ಕೂಡ ಅಸಹಾಯಕರಾಗಿದ್ದಾರೆ. ಈಗಾಗಲೇ ಭತ್ತದ ಕೃಷಿಗೆ 38 ಸಾವಿರ ರೂ. ಖರ್ಚು ಮಾಡಿದ್ದು ಈ ಮೊತ್ತ ರೈತನಿಗೆ ದೊಡ್ಡದಾಗಿದೆ. ರಾಸಾಯನಿಕ ಬಳಕೆಯಲ್ಲಿ ಬಹಳ ಎಚ್ಚರವಿರಬೇಕು ಎನ್ನುವುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿಯಾಗಿದೆ.