ಜಿಲ್ಲೆ

ಕಾಲಿಗೆರಗಿ ಧನ್ಯತಾ ಭಾವ ಮೆರೆದ ರೈತ!

Gadag

ಲಕ್ಷ್ಮೇಶ್ವರ: ನರೇಗಾ ಯೋಜನೆಯಡಿ ತನ್ನ ಜಮೀನಿನಲ್ಲಿ ಕೈಗೊಂಡ ಬದು ನಿರ್ಮಾಣ ಕೆಲಸದಿಂದ ಹರ್ಷಗೊಂಡ ರೈತನೊಬ್ಬ ಎಲ್ಲ ಕೃಷಿ ಕೂಲಿ ಕಾರ್ವಿುಕರಿಗೆ ಉಪಾಹಾರ ವ್ಯವಸ್ಥೆ ಮಾಡಿದ್ದಲ್ಲದೆ, ಹಿರಿಯ ಕೆಲಸಗಾರರ ಕಾಲಿಗೆರಗಿ ನಮಸ್ಕಾರ ಮಾಡಿ ಧನ್ಯತಾ ಭಾವ ಸಮರ್ಪಿಸಿದ ವಿಶೇಷ ಘಟನೆ ತಾಲೂಕಿನ ಅಕ್ಕಿಗುಂದ ಗ್ರಾಮದಲ್ಲಿ ನಡೆದಿದೆ.

ಗೊಜನೂರ ಗ್ರಾಪಂ ವ್ಯಾಪ್ತಿಯ ಅಕ್ಕಿಗುಂದ ಗ್ರಾಮದಲ್ಲಿ ರೈತ ಮಲ್ಲಪ್ಪ ವೀರಪ್ಪ ರೋಣದ ಅವರ 15 ಎಕರೆ ಜಮೀನಿನಲ್ಲಿ ಮಣ್ಣು ಸಂರಕ್ಷಣೆ ಮತ್ತು ಅಂತರ್ಜಲಮಟ್ಟ ಹೆಚ್ಚಳಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬದುವು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ನರೇಗಾದಡಿ ಕೆಲಸ ಮಾಡುವ ಕಾರ್ವಿುಕರಿಗೆ ಸರ್ಕಾರ ಕೂಲಿ ಕೊಡುತ್ತದೆ. ನಾನೇಕೆ ಅವರಿಗೆ ವಿಶೇಷವಾದ ಧನ್ಯತೆ ಹೇಳಬೇಕು ಎನ್ನುವ ಮನಸ್ಥಿತಿಯವರೇ ಬಹುತೇಕರು ಇದ್ದಾರೆ. ಆದರೆ, ಮಲ್ಲಪ್ಪ ಮಾತ್ರ ಈ ವಿಷಯದಲ್ಲಿ ವಿಶೇಷವಾಗಿ ಕಂಡು ಬಂದರು.

15 ಎಕರೆ ಇಳಿಜಾರು ಜಮೀನು ದೊಡ್ಡ ಮಳೆಗೆ ನೀರು ಹರಿದು, ಮಣ್ಣಿನ ಸವಕಳಿಯಾಗುತ್ತಿತ್ತು. ಭೂಮಿ ಫಲವತ್ತತೆ ಕಾಪಾಡಲು ಮೊದಲು ಬದುವು ನಿರ್ಮಾಣ ಮಾಡುವ ಅವಶ್ಯಕತೆಯಿತ್ತು. ಆದರೆ, ಬರುವ ಉತ್ಪನ್ನದಲ್ಲಿ ಜೀವನ ನಡೆಸುವುದೇ ಕಷ್ಟ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬದುವು ನಿರ್ಮಾಣ ಮಾಡಿಕೊಳ್ಳುವುದು ಆಗಿರಲಿಲ್ಲ. ಗೊಜನೂರ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ರೈತನ ಜಮೀನಿನಲ್ಲಿ ನರೇಗಾ ಯೋಜನೆಯಡಿ ಬದುವು ನಿರ್ವಿುಸಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ನಿತ್ಯ ನೂರಾರು ಕೃಷಿ ಕಾರ್ವಿುಕರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಜಮೀನು ಸಮತಟ್ಟು, ಫಲವತ್ತತೆ, ಅಂತರ್ಜಲ ಮಟ್ಟ ಹೆಚ್ಚಳ, ಮಣ್ಣಿನ ಸವಕಳಿ ತಪ್ಪಿಸುವ ಕಾರ್ಯವು ರೈತ ಮಲ್ಲಪ್ಪನಿಗೆ ಅತ್ಯಂತ ಸಂತಸ ತಂದಿದೆ. ಇದರಿಂದ ಬುಧವಾರ ಬೆಳಗ್ಗೆ ಕೆಲಸಕ್ಕೆ ಬಂದ 200 ಕೂಲಿಕಾರರಿಗೆ ಪ್ರೀತಿಯ ಉಪಾಹಾರ, ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದಲ್ಲದೆ, ಕೆಲಸದಲ್ಲಿ ಪಾಲ್ಗೊಂಡ ಹಿರಿಯರ ಕಾಲಿಗೆ ನಮಸ್ಕರಿಸಿ ಧನ್ಯತೆ ಅರ್ಪಿಸಿದರು.

ರೈತನಿಗೆ ತನ್ನ ಭೂಮಿತಾಯಿಯೇ ಆಸ್ತಿ. ಇತ್ತೀಚಿನ ವರ್ಷಗಳಲ್ಲಿ ಕೃಷಿಯಿಂದ ದೊಡ್ಡದಾದ ಲಾಭ ಸಿಗುತ್ತಿಲ್ಲ. ಖರ್ಚು-ವೆಚ್ಚಕ್ಕೆ ಸರಿಯಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿನ ಮಣ್ಣಿನ ಸಂರಕ್ಷಣೆ, ಫಲವತ್ತತೆ ಹೆಚ್ಚಳಕ್ಕಾಗಿ ಬದುವು ನಿರ್ಮಾಣ ಕಾರ್ಯ ಮಾಡಿಕೊಡುತ್ತಿರುವುದು ರೈತರ ಪಾಲಿನ ಆಶಾಕಿರಣವಾಗಿದೆ. ನಮ್ಮೂರಿನ ಕೃಷಿ ಕಾರ್ವಿುಕರು ಅತ್ಯಂತ ಕಾಳಜಿಯಿಂದ ನನ್ನ ಜಮೀನಿನಲ್ಲಿ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ. ಹೆಚ್ಚಿಗೆ ಏನನ್ನೂ ಕೊಡಲಾಗದ ನಾನು ಒಂದು ಹೊತ್ತಿನ ಉಪಾಹಾರ ವ್ಯವಸ್ಥೆ ಮಾಡಿ ಹಿರಿಯರಿಗೆ ನಮಸ್ಕರಿಸಿದ್ದೇನೆ.| ಮಲ್ಲಪ್ಪ ರೋಣದ, ರೈತಕೋವಿಡ್ ನಡುವೆಯೂ ಕೃಷಿ ಕೂಲಿಕಾರ್ವಿುಕರ ಬದುಕಿಗೆ ಆಸರೆ ಕಲ್ಪಿಸಲು ಮತ್ತು ಈ ಮೂಲಕ ರೈತರಿಗೆ ಅನುಕೂಲವಾಗುವ ಕಾರ್ಯಯೋಜನೆಗಳನ್ನು ನರೇಗಾದಡಿ ಕೈಗೊಳ್ಳಲಾಗಿದೆ. ಬದು ನಿರ್ಮಾಣ ಕಾರ್ಯ ರೈತರ ಪಾಲಿಗೆ ವರದಾನವಾಗಿದೆ. ಬದು ನಿರ್ಮಾಣ ಕಾರ್ಯದಿಂದ ಹರ್ಷಗೊಂಡ ರೈತ ಮಲ್ಲಪ್ಪ ಕೆಲಸದ ಅವಧಿಯಲ್ಲಿ ಕೋವಿಡ್ ನಿಯಮ ಪಾಲನೆಯೊಂದಿಗೆ ಉಪಾಹಾರ ವ್ಯವಸ್ಥೆ ಮಾಡಿ ಹಿರಿಯ ಕೆಲಸಗಾರರಿಗೆ, ಭೂಮಿತಾಯಿಗೆ ನಮಸ್ಕರಿಸಿ ಧನ್ಯತಾಭಾವ ವ್ಯಕ್ತಪಡಿಸಿದ್ದು ವಿಶೇಷವಾಗಿದ್ದು, ಎಲ್ಲರಿಗೂ ಖುಷಿ ಕೊಟ್ಟಿದೆ.| ಶಿವಾನಂದ ಮಾಳವಾಡ, ಗೊಜನೂರ ಗ್ರಾಪಂ ಪಿಡಿಒ