ಹಿರೇಬಾಗೇವಾಡಿ: ಸೈನಿಕ ಹಾಗೂ ರೈತರ ತ್ಯಾಗಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಅರಳೀಕಟ್ಟಿ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಫಡಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ ಉದ್ಘಾಟಿಸಿ ಮಾತನಾಡಿ, ರೈತರು ಮತ್ತು ಸೈನಿಕರು ಎರಡು ಕಣ್ಣುಗಳಿದ್ದಂತೆ ಯಾವುದನ್ನೂ ಅವರನ್ನು ಕಡೆಗಾಣಿಸಲಾಗದು. ಪ್ರಾಣ ಪಣಕ್ಕಿಟ್ಟು ನಮ್ಮನ್ನು ಕಾಯುವವನು ಸೈನಿಕನಾದರೆ, ಹೊಟ್ಟೆ ತುಂಬಿಸುವ ಕಾರ್ಯವನ್ನು ರೈತ ಮಾಡುತ್ತಾನೆ ಎಂದರು.
ಗ್ರಾಮದ ಎಲ್ಲ ಮಾಜಿ ಸೈನಿಕರು ಬಸವೇಶ್ವರ ವೃತ್ತದಿಂದ ಫಡಿಬಸವೇಶ್ವರ ದೇವಸ್ಥಾನದ ವರೆಗೆ ಬೈಕ್ ರ‌್ಯಾಲಿ ನಡೆಸಿದರು. ನಿವೃತ್ತ ಹಿರಿಯ ಯೋಧರನ್ನು ಸತ್ಕರಿಸಲಾಯಿತು. ಗಾಪಂ ಅಧ್ಯಕ್ಷೆ ಸ್ವಾತಿ ಇಟಗಿ, ಸದಸ್ಯ ಸುರೇಶ ಇಟಗಿ, ರೈತ ಬಸವಣ್ಣೆಪ್ಪ ಗಾಣಗಿ, ಬಸನಗೌಡ ಪಾಟೀಲ, ರಮೇಶ ತಿಗಡಿ, ಸಮನ್ವಯ ಸಮಿತಿ ಅಧ್ಯಕ್ಷ ಶಂಕರ ಕುಂಬಾರ, ಗ್ರಾಪಂ ಉಪಾಧ್ಯಕ್ಷೆ ನಾಜರೀನಬಾನು ಕರಿದಾವಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಪಾಟೀಲ, ಈರಪ್ಪ ಅರಳೀಕಟ್ಟಿ, ಯಲ್ಲಪ್ಪ ಕೆಳಗೇರಿ, ಪ್ರಕಾಶ ಜಪ್ತಿ, ವೈ.ಎಲ್.ಪಾಟೀಲ, ಸುನಂದಾ ಹೊರಗಿನಮನಿ, ಮಹೇಶ ಕಮ್ಮಾರ, ಎ.ಜಿ.ಮುಲ್ಲಾ, ಈರಣ್ಣ ವಣ್ಣೂರ ಇತರರಿದ್ದರು.