ಹಾವೇರಿ: ಕರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಘೊಷಿಸಿದ್ದರಿಂದ ಮದುವೆ ಸೇರಿ ವಿವಿಧ ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಇದರ ನೇರ ಪರಿಣಾಮ ಹೂವು ಬೆಳೆಗಾರರ ಮೇಲಾಗಿದ್ದು, ಹೂವಿಗೆ ಬೆಲೆಯೇ ಇಲ್ಲದಂತಾಗಿದೆ. ಹೀಗಾಗಿ ರೈತರು ಪರ್ಯಾಯ ಬೆಳೆ ಬೆಳೆಯಲು ಕಟಾವು ಹಂತಕ್ಕೆ ಬಂದ ಹೂವಿನ ಬೆಳೆಯನ್ನು ನಾಶಪಡಿಸಲು ಮುಂದಾಗಿದ್ದಾರೆ.
ತಾಲೂಕಿನ ನಾಗನೂರ ಗ್ರಾಮದ ರೈತ ಹೊಳಿಯಪ್ಪ ಸಿಂಗಾಪುರ 1 ಎಕರೆ ಜಮೀನಿನಲ್ಲಿ ಬೆಳೆದ ಸೇವಂತಿಗೆ ಹೂವಿನ ಬೆಳೆಯನ್ನು ಬುಧವಾರ ಟ್ರ್ಯಾಕ್ಟರ್ನಿಂದ ಕುಂಟಿ ಹೊಡೆದು ನಾಶಪಡಿಸಿದ್ದಾನೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆ ಬಂದು ಬೆಳೆದ ಬೆಳೆಯಲ್ಲ ನೀರು ಪಾಲಾಗಿತ್ತು. ಹಿಂಗಾರಿನಲ್ಲಾದರೂ ಉತ್ತಮ ಬೆಳೆ ಬೆಳೆದು ಮುಂಗಾರಿನಲ್ಲಾಗಿದ್ದ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಯೋಚಿಸಿ ಸಾವಿರಾರು ರೂ. ಖರ್ಚು ಮಾಡಿ ಸೇವಂತಿಗೆ ಹೂವು ಬೆಳೆದೆ. ಆದರೆ, ಲಾಕ್ಡೌನ್ನಿಂದಾಗಿ ಅದನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ರೈತ ಹೊಳಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
‘ಸಾವಿರಾರು ರೂ.ಗಳನ್ನು ವೆಚ್ಚ ಮಾಡಿ ಈ ಬಾರಿ ಬೇಸಿಗೆಯಲ್ಲಿ ನಡೆಯುವ ಮದುವೆ ಸೀಜನ್ನಲ್ಲಿ ಉತ್ತಮ ಬೆಲೆ ಸಿಗಲಿದೆ ಎಂಬ ಆಸೆಯೊಂದಿಗೆ ಹೂವಿನ ತೋಟ ಮಾಡಿದ್ದೆ. ಆದರೆ, ಯುಗಾದಿ ಹಬ್ಬಕ್ಕೆ ಸ್ವಲ್ಪ ದರ ಸಿಕ್ಕಿದ್ದು ಬಿಟ್ಟರೆ, ಈಗ ಕೆಜಿಗೆ 20ರಿಂದ 30 ರೂ.ಗೂ ಯಾರೂ ಕೇಳುತ್ತಿಲ್ಲ. ಹೂವು ಬಿಡಿಸುವ ಕೂಲಿಯೂ ಗಿಟ್ಟುತ್ತಿಲ್ಲ. ಹೀಗಾಗಿ ಬೆಳೆದ ಬೆಳೆಯನ್ನು ನಾಶ ಮಾಡುವ ಸ್ಥಿತಿ ಬಂದೊದಗಿದೆ. ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಹೂವು ಬೆಳೆಗಾರರಿಗೆ ಅಲ್ಪಸ್ವಲ್ಪ ಪ್ರೋತ್ಸಾಹ ಧನ ನೀಡಿದ್ದರು. ಈ ಬಾರಿ ಅದೂ ಇಲ್ಲ. ಹೀಗೆ ಆದರೆ ರೈತರು ಬೀದಿಗೆ ಬರುವುದು ನಿಶ್ಚಿತವಾಗಿದೆ’ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಮಾರಾಟಕ್ಕೂ ಅನುಮತಿಯಿಲ್ಲ: ರೈತರ ಹೂವಿಗೆ ಬೆಲೆ ಸಿಗುತ್ತಿಲ್ಲ ನಿಜ. ರೈತರಿಂದ ಖರೀದಿಸಿದ ಹೂವು ಮಾರಾಟಕ್ಕೆ ಸಮಯಾವಕಾಶವೇ ಇಲ್ಲ. ನಾವು ಇಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ಬೇರೆಡೆ ಸಾಗಿಸಲು ಅನುಮತಿಯಿದ್ದರೂ ಹೂವಿಗೆ ಮೊದಲಿನಷ್ಟು ಬೇಡಿಕೆಯಿಲ್ಲ. ಹೀಗಾಗಿ ಬೇರೆ ಜಿಲ್ಲೆಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಮದುವೆ ಕಾರ್ಯಕ್ರಮಗಳು ಬಹಳಷ್ಟು ಸಿಂಪಲ್ ಆಗುತ್ತಿವೆ. ಇದರಿಂದ ಹೂವಿನ ಅಲಂಕಾರಕ್ಕೆ ಹೆಚ್ಚಿನ ಬೇಡಿಕೆ ಇಲ್ಲ. ಇದರಿಂದ ಅನಿವಾರ್ಯವಾಗಿ ದರ ಕುಸಿತವಾಗಿದೆ. ಬರೀ ರೈತರಷ್ಟೆ ಅಲ್ಲ. ಖರೀದಿದಾರರೂ ಹೂವು ಕೇಳುವವರಿಲ್ಲದೇ ಬೀದಿಗೆ ಚೆಲ್ಲಿದ ಉದಾಹರಣೆಗಳಿವೆ ಎಂದು ವ್ಯಾಪಾರಿ ಚಮನ್ಸಾಬ ತಿಳಿಸುತ್ತಾರೆ.
ಜಿಲ್ಲೆಯಲ್ಲಿ ಅಂದಾಜು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಬೆಳೆಯಲಾಗಿದೆ. ಎಲ್ಲ ರೈತರದ್ದೂ ಇದೇ ಸಮಸ್ಯೆಯಾಗಿದೆ. ಬೀಜ, ಗೊಬ್ಬರಕ್ಕೆಂದು ಸಾವಿರಾರು ರೂ. ವೆಚ್ಚ ಮಾಡಿದ್ದಲ್ಲದೇ ಅದಕ್ಕೆ ಹಗಲು ರಾತ್ರಿಯನ್ನದೇ ನೀರು ಹಾಯಿಸಿದ ರೈತರ ಕೂಲಿಯೂ ಇಂದು ಬರದಾಗಿದೆ. ಸರ್ಕಾರ ಕೂಡಲೆ ಎಚ್ಚೆತ್ತು ಹೂವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ರೈತರಿಗೆ ತಮ್ಮ ಉತ್ಪನ್ನ ಸಾಗಿಸಲು ಗ್ರೀನ್ಪಾಸ್ ಕೊಟ್ಟಿದ್ದೇವೆ. ಆದರೂ ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಅಲ್ಲದೆ, ಕೆಲ ರೈತರು ಬೆಳೆ ನಾಶ ಮಾಡಿರುವ ಮಾಹಿತಿಯೂ ಬಂದಿದೆ. ಸರ್ಕಾರ ಕಳೆದ ವರ್ಷ ಹೂವು ಬೆಳೆಗಾರರಿಗೆ 1 ಹೆಕ್ಟೇರ್ಗೆ 25 ಸಾವಿರ ರೂ.ಗಳ ಸಹಾಯಧನ ನೀಡಿತ್ತು. ಬುಧವಾರ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೊಷಿಸಿದ್ದು, ಅದರಲ್ಲಿ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದಿಂದ ಆದೇಶ ಬಂದ ಕೂಡಲೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಒದಗಿಸಲಾಗುವುದು. | ಎಲ್. ಪ್ರದೀಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾವೇರಿ