ಜಿಲ್ಲೆ

ನದಿಯಲ್ಲಿ ಕೊಚ್ಚಿ ಹೋದ ರೈತ

ಎಸ್.ಎನ್.ರವೀಂದ್ರ

ಮೂಡಿಗೆರೆ: ಬೈದುವಳ್ಳಿ ಗ್ರಾಮದಲ್ಲಿ ಶುಕ್ರವಾರ ಜಾನುವಾರು ಕಟ್ಟಲು ಹೋದ ರೈತ ಹೇಮಾವತಿ ಉಪನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

ಡಿ.ಎಲ್.ಗೋಪಾಲಗೌಡ(63) ಎಂಬುವರು ಜಾನುವಾರುಗಳನ್ನು ಗದ್ದೆಯಲ್ಲಿ ಕಟ್ಟಲು ಹೋದಾಗ ತುಂಬಿ ಹರಿಯುತ್ತಿದ್ದ ಉಪನದಿಗೆ ಜಾರಿ ಬಿದ್ದಿದ್ದು, ನೀರಿನ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ನದಿಯಲ್ಲಿ ಶೋಧ ನಡೆಸಿದರು. ಸ್ಥಳಕ್ಕೆ ಗೋಣಿಬೀಡು ಪೊಲೀಸರು, ಅಗ್ನಿಶಾಮಕದಳ, ಮುಳುಗುತಜ್ಞರು ಭೇಟಿ ನೀಡಿ ಹುಡುಕಾಟ ನಡೆಸಿದರು. ಸಂಜೆ 6 ಗಂಟೆವರೆಗೂ ಗೋಪಾಲಗೌಡ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ದಳದವರೊಂದಿಗೆ ಸಮಾಜ ಸೇವಕರಾದ ಫಿಶ್ ಮೋಣು, ಆರಿಫ್ ಮತ್ತವರ ತಂಡದವರು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದರು. ತಹಸೀಲ್ದಾರ್ ರಾಜಶೇಖರ್‌ಮೂರ್ತಿ ಸ್ಥಳಕ್ಕೆ ಭೇಟಿ ನೀಡಿದರು. ಗೋಣಿಬೀಡು ಪಿಎಸ್‌ಐ ಹರ್ಷವರ್ಧನ್ ಸ್ಥಳದಲ್ಲಿದ್ದರು. ನದಿ ಸಮೀಪದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಮತ್ತು ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅವಿವಾಹಿತರಾಗಿದ್ದ ಗೋಪಾಲಗೌಡ ಅಣ್ಣನ ಮನೆಯಲ್ಲಿ ವಾಸವಾಗಿದ್ದರು.