ಜಿಲ್ಲೆ

ತುಂಡಾದ ವಿದ್ಯುತ್ ತಂತಿ ತುಳಿದು ರೈತ ಸಾವು

ಎಂ.ರವಿ

ಕಿಕ್ಕೇರಿ: ಸಮೀಪದ ಬೆಡದಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ರೈತನೊಬ್ಬ ಸ್ಥಳದಲ್ಲಿಯೇ ಮಂಗಳವಾರ ಮೃತಪಟ್ಟಿದ್ದಾನೆ.

ಸಿಂಗನಹಳ್ಳಿ ಗ್ರಾಮದ ಶಿವೇಗೌಡ (60) ಮೃತರು. ಮಂಗಳವಾರ ಮಧ್ಯಾಹ್ನ ತೋಟದಲ್ಲಿ ಹೋಗುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದಾರೆ. ಇದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಹಳ ಹೊತ್ತಾದರೂ ಕಾಣದ ತಂದೆಯನ್ನು ಮನೆಯವರು ತೋಟಕ್ಕೆ ಬಂದು ಹುಡುಕಾಡಿದಾಗ ವಿದ್ಯುತ್ ತಂತಿ ತುಳಿದು ಮೃತಪಟ್ಟಿರುವುದು ಗೊತ್ತಾಗಿದೆ.

ಕೂಡಲೇ ಕಿಕ್ಕೇರಿ ಪೊಲೀಸರಿಗೆ ದೂರು ನೀಡಲಾಗಿ, ಸ್ಥಳಕ್ಕೆ ಇನ್ಸ್‌ಪೆಕ್ಟರ್ ರೇವತಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಕಳೆದೆರಡು ದಿನಗಳ ಹಿಂದೆ ಇದೇ ರೀತಿ ರೈತ ಮಹಿಳೆ ತುಂಡಾಗಿದ್ದ ವಿದ್ಯುತ್ ತಂತಿ ತುಳಿದು ಲಕ್ಷ್ಮೀಪುರ ಗ್ರಾಮದಲ್ಲಿ ಮೃತಪಟ್ಟಿದ್ದಳು. ಸೆಸ್ಕ್ ಇಲಾಖೆಯವರ ಬೇಜವಾಬ್ದಾರಿತನದಿಂದ ರೈತರು ಸಾವಿಗೀಡಾಗುವಂತಾಗಿದೆ. ಅಧಿಕಾರಿಗಳು ಸೂಕ್ತ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಪಂ ಅಧ್ಯಕ್ಷ ಕುಬೇರ, ಬೆಡದಹಳ್ಳಿ ಸುನಿಲ್, ಕಾಂತರಾಜು ಹಾಜರಿದ್ದರು.

ಕಿಕ್ಕೇರಿ ಸಮೀಪದ ಬೆಡದಹಳ್ಳಿ ಗ್ರಾಮದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿ ಮಂಗಳವಾರ ತುಳಿದು ಸ್ಥಳದಲ್ಲಿಯೇ ಮೃತನಾದ ರೈತ ಶಿವೇಗೌಡ. ಇನ್‌ಸ್ಪೆಕ್ಟರ್ ರೇವತಿ, ಸಿಬ್ಬಂದಿ ಹಾಜರಿದ್ದರು.