ತೇರದಾಳ: ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಅಲ್ಲಮಪ್ರಭು ದೇವಸ್ಥಾನ ಬಳಿಯ ಚಂದ್ರಶೇಖರ ಗಣಾಚಾರಿ ಅವರ ಮನೆಯ ಮಣ್ಣಿನ ಮಾಳಿಗೆ ಗುರುವಾರ ಬೆಳಗಿನ ಜಾವ ಕುಸಿದು ಬಿದ್ದು ಮಣ್ಣಿನಲ್ಲಿ ಸಿಲುಕಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮನೆಯಲ್ಲಿ ವಾಸವಿದ್ದ ದುಂಡಯ್ಯ ಮಠಪತಿ ಅವರ ಪುತ್ರಿ ಅಶ್ವಿನಿ ದುಂಡಯ್ಯ ಮಠಪತಿ(8ನೇ ತರಗತಿ) ಬಾಲಕಿಯೇ ಮಣ್ಣಿನಲ್ಲಿ ಸಿಕ್ಕಿಕೊಂಡವರು. ಮನೆಯಲ್ಲಿದ್ದ ತಂದೆ, ತಾಯಿ ಸೇರಿ ನಾಲ್ವರು ಬೆಳಗ್ಗೆ ಬೇಗ ಎದ್ದಿರುವ ಪರಿಣಾಮ ಅನಾಹುತವೊಂದು ತಪ್ಪಿದೆ.
ಸ್ಥಳಕ್ಕೆ ರಬಕವಿ-ಬನಹಟ್ಟಿ ತಹಸೀಲ್ದಾರ್ ಡಿ.ಎಚ್. ಹೂಗಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಸ್ಪತ್ರೆಗೂ ತೆರಳಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಸ್ಥಳೀಯ ಗ್ರಾಮಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಕಾಪ್ಸೆ, ಸಿಬ್ಬಂದಿ ಮಾದೇವ ಯಲ್ಲಟ್ಟಿ ಇದ್ದರು.