ಜಿಲ್ಲೆ

ನಕಲಿ ನೋಟಿಫಿಕೇಶನ್: ಆನ್​ಲೈನ್​ನಲ್ಲಿ ರೈಲ್ವೆ ಹುದ್ದೆಗೆ ಅರ್ಜಿ ಹಾಕುವ ಮುನ್ನ ಎಚ್ಚರ!

ಹುಬ್ಬಳ್ಳಿ: ಆನ್​ಲೈನ್​ನಲ್ಲಿ ರೈಲ್ವೆ ಹುದ್ದೆಗೆ ಅರ್ಜಿ ಹಾಕುವ ಮುನ್ನ ಹುಷಾರ್! ರೈಲ್ವೆ ಇಲಾಖೆ ನೋಟಿಫಿಕೇಶನ್​ ಹೊರಡಿಸದಿದ್ದರೂ ದಂಧೆಕೋರರು ಹುದ್ದೆಗೆ ನೇಮಕಾತಿ ಸಂಬಂಧ ನಕಲಿ ನೋಟಿಫಿಕೇಶನ್ ತೆರೆದಿದ್ದಾರೆ. ನೈಋತ್ಯ ರೈಲ್ವೆ ವಲಯದ ಜಿಎಂ ವ್ಯಾಪ್ತಿಯಲ್ಲಿ (ಮಹಾಪ್ರಬಂಧಕರು) ಕೋಟಾದಡಿ ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ 2800 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನಿರುದ್ಯೋಗಿಗಳನ್ನು ಮರಳು ಮಾಡಿ ದುಡ್ಡು ಮಾಡುವ ಜಾಲ ಇರುವ ಸಾಧ್ಯತೆ ಎಂದು ಕಳವಳ ವ್ಯಕ್ತಪಡಿಸಿರುವ ರೈಲ್ವೆ ಇಲಾಖೆಯು ವಂಚಕರಿದ್ದಾರೆ ಎಚ್ಚರ ವಹಿಸಿ ಎಂದು ಸೂಚಿಸಿದೆ.

ನೇಮಕಾತಿ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಮಾಡಬಾರದು ಎಂದು ಖಚಿತ ಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುವ ರಾಕೇಟ್‌ಗಳಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ರೈಲ್ವೆ ಇಲಾಖೆಯು ನಕಲಿ ನೋಟಿಫಿಕೇಶನ್​ ವಿರುದ್ಧ ದೂರು ಕೊಟ್ಟು ತನಿಖೆಗೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಗೃತಿ ಉಂಟು ಮಾಡುವ ಕೆಲಸಕ್ಕೂ ಮುಂದಾಗಿದೆ.

ಜಿಎಂ ಕೋಟಾದಡಿ ಹೊರಡಿಸಿರುವ ನೋಟಿಫಿಕೇಶನ್​ನಲ್ಲಿ ಜಿಎಂ‌ ಸಹಿ ಹಾಗೂ ಸೀಲು ಕೂಡ ನಕಲು ಮಾಡಲಾಗಿದೆ. ಈ ಪತ್ರ ಮೇಲ್ನೋಟಕ್ಕೆ ಅಸಲಿ ಎಂಬಂತೇ ಕಾಣುತ್ತೆ. ಇಂತಹ ಪತ್ರ, ನೋಟಿಫಿಕೇಶನ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿರುದ್ಯೋಗಿಗಳನ್ನು ನಂಬಿಸಿ ದುಡ್ಡು ವಸೂಲಿ ಮಾಡುವ ಜಾಲವಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.