ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಭಾನುವಾರ ನಡೆದ ಪರೀಕ್ಷೆಯಲ್ಲಿ ವಿವಿಧೆಡೆ ನಕಲಿ ಅಭ್ಯರ್ಥಿಗಳ ಬಂಧನದ ಬೆನ್ನಲ್ಲೇ ರಾಜ್ಯಾದ್ಯಂತ ನಕಲಿ ಅಭ್ಯರ್ಥಿಗಳ ದೊಡ್ಡ ಜಾಲ ಸಕ್ರಿಯವಾಗಿರುವ ಅಂಶ ಹೊರ ಬಿದ್ದಿದೆ. 5 ಲಕ್ಷ ರೂ. ಕೊಟ್ಟರೆ ಕಾನ್ಸ್ಟೇಬಲ್ ಪರೀಕ್ಷೆ ಪಾಸ್ ಮಾಡಿಕೊಡುವುದಾಗಿ ಡೀಲ್ ಮಾಡಿಕೊಂಡಿರುವ ಆತಂಕಕಾರಿ ಮಾಹಿತಿ ಪೊಲೀಸ್ ಇಲಾಖೆ ಬೆಚ್ಚಿ ಬೀಳುವಂತೆ ಮಾಡಿದೆ.
ಹುಬ್ಬಳ್ಳಿಯಲ್ಲಿ ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿ ಬಿದ್ದ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆಯ ಅಸಲಿ ಕಾನ್ಸ್ಟೇಬಲ್ ಅಡಿವೆಪ್ಪ ಯರಗುದ್ರಿ ಪರೀಕ್ಷೆ ಪಾಸ್ ಮಾಡಿ ಕೊಡಲು ಅಸಲಿ ಅಭ್ಯರ್ಥಿ ಲಕ್ಕಪ್ಪ ಬೆಟಗೇರಿಯಿಂದ 5 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 1 ಲಕ್ಷ ರೂ. ಪಡೆದಿದ್ದ. ಬೆಳಗಾವಿಯಲ್ಲಿ ಸಿಕ್ಕಿಬಿದ್ದಿರುವ ಮತ್ತೊಬ್ಬ ನಕಲಿ ಅಭ್ಯರ್ಥಿ ಭೀಮಶಿ ಹುಲ್ಲೋಳಿ ಎಂಬಾತ ಈ ಡೀಲ್ನ ನೇತೃತ್ವ ವಹಿಸಿದ್ದ. ಬೆಳಗಾವಿಯಲ್ಲಿ ಕೋಚಿಂಗ್ ಸೆಂಟರ್ ಒಂದರಲ್ಲಿ ಶಿಕ್ಷಕನಾಗಿರುವ ಭೀಮಶಿ ಅಡಿವೆಪ್ಪ ಮತ್ತು ಲಕ್ಕಪ್ಪ ನಡುವೆ ಹಣದ ವ್ಯವಹಾರ ಕುದುರಿಸಿದ್ದ. ಅಡಿವೆಪ್ಪ ಈ ಹಿಂದೆ ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ನಡೆದ ಪರೀಕ್ಷೆಯಲ್ಲೂ ನಕಲಿ ಅಭ್ಯರ್ಥಿಯಾಗಿ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದ ಎಂದು ಮೂಲಗಳು ತಿಳಿಸಿವೆ.
ಅಸಲಿ ಅಭ್ಯರ್ಥಿ ಬಂಧನ: ಭಾನುವಾರ ನಕಲಿ ಅಭ್ಯರ್ಥಿ ಅಡಿವೆಪ್ಪನನ್ನು ಬಂಧಿಸಿದ್ದ ಗೋಕುಲ ರೋಡ್ ಠಾಣೆ ಪೊಲೀಸರು ಸೋಮವಾರ ಅಸಲಿ ಅಭ್ಯರ್ಥಿ ಲಕ್ಕಪ್ಪ ಬೆಟಗೇರಿಯನ್ನು ಬೆಳಗಾವಿ ಜಿಲ್ಲೆ ರಾಯಭಾಗದಲ್ಲಿ ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಐಡಿ ತನಿಖೆಯಾಗಲಿ: ವರ್ಷಗಟ್ಟಲೆ ನಿರಂತರವಾಗಿ ಅಧ್ಯಯನ ಮಾಡಿ ಪರೀಕ್ಷೆಗೆ ಹಾಜರಾಗುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನಕಲಿ ಅಭ್ಯರ್ಥಿಗಳಿಂದ ವಂಚನೆಯಾಗುತ್ತಿದೆ. ಜಾಲ ದೊಡ್ಡದಿರುವುದರಿಂದ ಸರ್ಕಾರ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಕೆಲವು ಅಭ್ಯರ್ಥಿಗಳು ಪತ್ರಿಕೆ ಜತೆ ಮಾತನಾಡುತ್ತ ಮನವಿ ಮಾಡಿದರು.
ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳ ಜಾಲ ಇರುವುದು ತನಿಖೆಯಿಂದ ಗೊತ್ತಾಗುತ್ತಿದೆ. ಇದರ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ಜರುಗಿಸಲಾಗುವುದು. ಈಗಾಗಲೇ ನಕಲಿ ಮತ್ತು ಅಸಲಿ ಅಭ್ಯರ್ಥಿಗಳನ್ನೆಲ್ಲ ಬಂಧಿಸಲಾಗಿದೆ. | ರಾಘವೇಂದ್ರ ಸುಹಾಸ್, ಐಜಿಪಿ, ಬೆಳಗಾವಿ ಉತ್ತರ ವಲಯ