ಗಂಗಾಧರ್ ಬೈರಾಪಟ್ಟಣ ರಾಮನಗರ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ಆದರೆ, ರಾಮನಗರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಇದರಿಂದಾಗಿ ಈಗಾಗಲೇ ಬಿತ್ತನೆ ಆಗಿರುವ ಕೃಷಿ ಪ್ರದೇಶದ ರೈತರಿಗೆ ಮತ್ತೊಮ್ಮೆ ಬರದ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ರಾಗಿಯೇ ಪ್ರಮುಖ ಬೆಳೆಯಾಗಿದ್ದು, ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡು ಪೈರುಗಳು ಹುಲುಸಾಗಿ ಬೆಳೆದಿದ್ದರೂ ಅಗತ್ಯಕ್ಕೆ ತಕ್ಕಂತೆ ಮಳೆ ಇಲ್ಲದ ಕಾರಣ ಬಾಡುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಆಗಿದೆ.
ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 91,108 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇಲಾಖೆ ಹೊಂದಿತ್ತು. ಇದರಲ್ಲಿ ಇಲ್ಲಿಯವರೆಗೆ ಶೇ.87 ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣ ರಾಗಿಯೇ ಆವರಿಸಿಕೊಂಡಿದೆ. ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತಾದರೂ, ಲಭ್ಯ ಮಾಹಿತಿ ಪ್ರಕಾರ ಸುಮಾರು 55&60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದ್ದು, ಇದು ಮಳೆ ಆಶ್ರಿತ ಬೆಳೆಯಾಗಿದೆ. ಇದರ ಜತೆಗೆ ಈಗಾಗಲೇ ಭತ್ತ, ನೆಲಗಡಲೆ, ಅವರೆ, ತೊಗರಿ, ಸೇರಿ ಇತರ ಬೆಳೆಗಳ ಬಿತ್ತನೆ ಕಾರ್ಯವೂ ನಡೆದಿದೆ.
ಈ ಬಾರಿಯ ಮುಂಗಾರು ಆರಂಭಗೊಂಡ ದಿನದಿಂದಲೂ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಮಳೆ ಆಗಲೇ ಇಲ್ಲ. ಈ ಬಾರಿ ಜೂನ್ 1ರಿಂದ ಸೆ.16 ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 342 ಮಿಮೀ ಮಳೆ ಆಗಬೇಕಿತ್ತು. ವಾಸ್ತವವಾಗಿ 346 ಮಿಮೀ ಮಳೆ ಆಗಿದೆಯಾದರೂ, ಇದು ಬಹುತೇಕ ಆಗಸ್ಟ್ ಅಂತ್ಯದವರೆಗೆ ಬಿದ್ದ ಮಳೆ. ಈ ಮಳೆ ಆಧರಿಸಿಯೇ ಕೃಷಿಕರು ಬಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ, ಸೆಪ್ಟೆಂಬರ್ನಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಸೆಪ್ಟೆಂಬರ್ನಲ್ಲಿ ವಾಡಿಕೆಯಂತೆ 81.7 ಮಿಮೀ ಮಳೆ ಆಗಬೇಕು. ಆದರೆ 15 ದಿನಗಳು ಕಳೆದರೂ ಇಲ್ಲಿಯವರೆಗೂ ಬಿದ್ದಿರುವ ಮಳೆ 18.8 ಮಿಮೀ ಮಾತ್ರ.
ಸದ್ಯದ ಪ್ರಶ್ನೆ ಮುಂದೆ ಮಳೆ ಬಾರದಿದ್ದರೆ ಎನ್ನುವುದೇ ಆಗಿದೆ. ಒಂದೆಡೆ ರೈತರು ಮಳೆ ಬಾರದಿದ್ದರೆ ಏನಪ್ಪಾ ಗತಿ ಎನ್ನುವಂತೆ ಆಗಿದ್ದರೆ, ಮತ್ತೊಂದೆಡೆ ಕೃಷಿ ಇಲಾಖೆಯೂ ಮಳೆ ಬಾರದಿದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆ ಎದುರಿಸುತ್ತಿದೆ. ಒಂದು ವೇಳೆ ಇನ್ನೊಂದು ವಾರದಲ್ಲಿ ಭೂಮಿ ತಣಿಯುವಂತೆ ಮಳೆ ಬೀಳದಿದ್ದರೆ ರಾಗಿ ಸೇರಿ ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆದಿರುವ ಬಹುತೇಕ ಬೆಳೆಗಳು ನೆಲ ಕಚ್ಚುವುದು ಗ್ಯಾರಂಟಿ. ಇದಕ್ಕಾಗಿಯೇ ಮಳೆಗಾಗಿಯೇ ಪ್ರಾರ್ಥಿಸುತ್ತಾ ಕೂರುವಂತೆ ಆಗಿದೆ.
ಸದ್ಯಕ್ಕೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆ ಮಾತ್ರ ಬೀಳುತ್ತಿಲ್ಲ. ಬೀಳುತ್ತಿರುವ ಅಲ್ಪ ಪ್ರಮಾಣದ ಮಳೆ ಭೂಮಿಯಲ್ಲಿನ ಕಾವನ್ನು ಹೆಚ್ಚಿಸುತ್ತಿದ್ದು, ಇದು ಬೆಳೆಗಳ ಬೆಳವಣಿಗೆಗೆ ಪೂರಕವಾಗಿ ಇಲ್ಲ.
ಜಿಲ್ಲೆಯಲ್ಲಿ ಈ ಬಾರಿ ನಿರೀತ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಆಗಿಲ್ಲ. ಇವರೆವಿಗೂ ಶೇ.87 ಬಿತ್ತನೆ ಆಗಿದೆ. ಇನ್ನೊಂದು ವಾರದಲ್ಲಿ ಮಳೆ ಬೀಳದಿದ್ದರೆ ಬೆಳೆಗಳು ಒಣಗಲಿವೆ. ಅದರಲ್ಲೂ ರಾಗಿ ಬೆಳೆ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. > ಅಂಬಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರ
ಮಳೆ ವಿವರ
ಜೂ.1ರಿಂದ ಸೆ.16ರ ಅಂತ್ಯಕ್ಕೆ
ತಾಲೂಕು ವಾಡಿಕೆ ವಾಸ್ತವ ಕೊರತೆ (ಶೇ)
ಚನ್ನಪಟ್ಟಣ 340 286 16(&)
ಕನಕಪುರ 291 291 00
ಮಾಗಡಿ 429 477 11 (+)
ರಾಮನಗರ 383 359 06 (&)
ಹಾರೋಹಳ್ಳಿ 349 301 14 (&)
ಜಿಲ್ಲೆ 342 346 01(+)
===
ಸೆ.1ರಿಂದ ಸೆ.16ರ ಅಂತ್ಯಕ್ಕೆ
ತಾಲೂಕು ವಾಡಿಕೆ ವಾಸ್ತವ ಕೊರತೆ (ಶೇ)
ಚನ್ನಪಟ್ಟಣ 85.00 16.70 80
ಕನಕಪುರ 71.90 10.40 86
ಮಾಗಡಿ 104.40 29.30 72
ರಾಮನಗರ 91.50 20.40 78
ಹಾರೋಹಳ್ಳಿ 81.60 21.30 74
ಜಿಲ್ಲೆ 81.10 18.80 77