ಸಾಂದರ್ಭಿಕ ಚಿತ್ರ 
ಜಿಲ್ಲೆ

ಫೇಸ್‌ಬುಕ್​ನಲ್ಲಿ ಪ್ರೀತಿಸಿ ಮದ್ವೆಯಾದಾಕೆ ಪಟ್ಟ ಪಾಡು ಅಷ್ಟಿಷ್ಟಲ್ಲ! ಸಾವಿನ ಮನೆಯ ಕದ ತಟ್ಟಿ ಬಂದ ಕಾರ್ಕಳದ ಯುವತಿ

Dakshina Kannada

ಕಾರ್ಕಳ: ಫೇಸ್​ಬುಕ್​ ಮೂಲಕ ಪರಸ್ಪರ ಪರಿಚಯವಾದ ಯುವಜೋಡಿ, ಪ್ರೀತಿಸಿ ದಾಂಪತ್ಯ ಜೀವನಕ್ಕೂ ಕಾಲಿಟ್ಟಿತ್ತು. ವರ್ಷ ಕಳೆಯುತ್ತಿದ್ದಂತೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಗಂಡನ ವಿರುದ್ಧ ಪತ್ನಿ ಕಾರ್ಕಳ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನ ಸೌಮ್ಯಾ(33) ದೂರು ನೀಡಿದವರು. ಸೌಮ್ಯಾ ಅವರಿಗೆ ನಾಲ್ಕೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಕಾಸರಗೋಡು ಜಿಲ್ಲೆಯ ಉಪ್ಪಳ ಬೇಕೂರು ನಿವಾಸಿ ಸುನೀಲ್ ಟಿ. ಎಂಬುವವರು ಪರಿಚಯವಾಗಿದ್ದರು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದು, 2019ರ ಮೇ 12ರಂದು ಕಾರ್ಕಳದ ಪೆರ್ವಾಜೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದರು. 2019ರ ಜೂನ್ 1ರಂದು ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು.

ವರ್ಷದವರೆಗೆ ದಾಂಪತ್ಯ ಜೀವನ ನಡೆಸಿದ ಬಳಿಕ ಪತಿ ಸುನೀಲ್​ಗೆ ವರದಕ್ಷಿಣೆ ದಾಹ ಶುರುವಾಗಿದೆ. 5 ಲಕ್ಷ ರೂ. ವರದಕ್ಷಿಣೆ ಕೊಡಬೇಕೆಂದು ಒತ್ತಾಯಿಸಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದನು. ಆತನ ವರ್ತನೆಯಿಂದ ಬೇಸತ್ತ ಸೌಮ್ಯಾ, ಚಿನ್ನ ಅಡವಿಟ್ಟು 80 ಸಾವಿರ ರೂ. ನೀಡಿದ್ದರು ಎನ್ನಲಾಗಿದೆ.

2019ರ ಜೂನ್ 30ರಂದು 3 ಲಕ್ಷ ರೂ. ಖರ್ಚು ಮಾಡಿ ಆರತಕ್ಷತೆಯನ್ನು ಕಾರ್ಕಳದಲ್ಲಿ ನಡೆಸಿದ್ದು, ಬಳಿಕ ಸುನೀಲ್ ತನ್ನ ಮನೆಗೆ ಕರೆದುಕೊಂಡು ಹೋಗಿಲ್ಲ. 2021ರ ನ.17ರ ಬಳಿಕ ಕರೆ ಮಾಡಿಲ್ಲ. ಕರೆ ಮಾಡಬೇಡ ಎಂದು ಬೈಯುತ್ತಿದ್ದರು. ಗಂಡನ ವರ್ತನೆಯಿಂದ ಮಾನಸಿಕವಾಗಿ ನೊಂದ ನಾನು 2022ರ ಮಾರ್ಚ್ 7ರಂದು ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಸೌಮ್ಯಾ ದೂರಿನಲ್ಲಿ ತಿಳಿಸಿದ್ದಾರೆ.