ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ಗೆ ಕೋಟ್ಯಂತರ ರೂಪಾಯಿ ಸಾಲ ಕೊಟ್ಟಿದ್ದ ಗುಜರಿ ವ್ಯಾಪಾರಿ, ಕಾಂಗ್ರೆಸ್ ಮುಖಂಡ ಯೂಸೂಫ್ ಶರೀಫ್ (ಕೆಜಿಎಫ್ ಬಾಬು) ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಸಿಲುಕಿರುವ ಕೆಜಿಎಫ್ ಬಾಬುಗೆ ಆ.10ರೊಳಗೆ ಉತ್ತರ ನೀಡುವಂತೆ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಐಎಂಎ ಬಹುಕೋಟಿ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಜಮೀರ್ರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿದ್ದರು. ಕೆಜಿಎಫ್ ಬಾಬು ಬಳಿ 3 ಕೋಟಿ ರೂ. ಸಾಲ ಪಡೆದಿರುವುದಾಗಿ ಜಮೀರ್ ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿ ಅಜ್ಯುಡಿಕ್ಟಿಂಗ್ ಕಮಿಟಿಗೆ ಒಪ್ಪಿಸಿದ್ದಾರೆ. ಈ ವಸ್ತುಗಳನ್ನು ಕೆಜಿಎಫ್ ಬಾಬುಗೆ ವಾಪಸ್ ನೀಡದಂತೆ ಇಡಿ ಅಧಿಕಾರಿಗಳು ಆಕ್ಷೇಪ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಜ್ಯುಡಿಕ್ಟಿಂಗ್ ಕಮಿಟಿ, ಆ.10ರ ಒಳಗಾಗಿ ಲಿಖಿತ ಉತ್ತರ ನೀಡಲು ಕೆಜಿಎಫ್ ಬಾಬುಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
40 ಕೋಟಿ ರೂ. ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೇನೆ. ಆದರೂ ಇಡಿ ಅಧಿಕಾರಿಗಳು ಟಾರ್ಚರ್ ಕೊಡುತ್ತಿದ್ದಾರೆ. ನನ್ನ ಪತ್ನಿಗೆ ಆಪರೇಷನ್ ಆಗಿದೆ. ಆದರೂ ವಿಚಾರಣೆ ನಡೆಸಿದ್ದಾರೆ ಎಂದು ಕೆಜಿಎಫ್ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.