ಮೈಸೂರು: ಮನೆಯವರು ಕುಡಿಯಲು ಹಣ ನೀಡಲಿಲ್ಲವೆಂದು ಆಕ್ರೋಶಗೊಂಡ ವ್ಯಕ್ತಿ, ತನ್ನ ತಂಗಿಯ ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ರಮ್ಯಾ ಎಂಬುವರ ಮಗಳು ಋತಿ ಕೊಲೆಯಾದ ಮಗು. ನಗರದ ಕನಕಗಿರಿ ನಿವಾಸಿ ರಾಜು(30) ಕೊಲೆ ಮಾಡಿದ ಕಿರಾತಕ.
ಏನಿದು ಘಟನೆ?: ರಾಜು ಮದ್ಯವ್ಯಸನಿಯಾಗಿದ್ದು, ಕುಡಿಯಲು ಹಣ ನೀಡುವಂತೆ ಯಾವಾಗಲೂ ಮನೆಯವರನ್ನು ಪೀಡಿಸುತ್ತಿದ್ದನು. ರಾಜು ತಾಯಿ ವಿದ್ಯಾರಣ್ಯಪುರಂನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ತಂಗಿ ರಮ್ಯಾ ಅವರನ್ನು ಎರಡು ವರ್ಷದ ಹಿಂದೆ ಮಂಡ್ಯದ ನಾಗೇಂದ್ರ ಎಂಬುವರ ಜತೆ ಮದುವೆ ಮಾಡಲಾಗಿತ್ತು. ಆಕೆ 8 ತಿಂಗಳ ಹಿಂದೆ ಬಾಣಂತನಕ್ಕೆಂದು ತವರು ಮನೆಗೆ ಬಂದಿದ್ದರು.
ಹಣದ ವಿಚಾರವಾಗಿ ಗುರುವಾರ ರಾತ್ರಿ ರಾಜು ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಶುಕ್ರವಾರ ಬೆಳಗ್ಗೆ ಮದ್ಯ ಸೇವಿಸಿ, ತನ್ನ ತಾಯಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೂ ಹೋಗಿ ಹಣ ನೀಡುವಂತೆ ಜೋರು ಗಲಾಟೆ ಮಾಡಿದ್ದಾನೆ. ಬಳಿಕ ಅಲ್ಲಿಂದ ನೇರವಾಗಿ ಮನೆಗೆ ಬಂದು ರಮ್ಯಾ ಜತೆಯೂ ಗಲಾಟೆ ಮಾಡಿದ್ದಾನೆ. ಇದರಿಂದ ಹೆದರಿದ ರಮ್ಯಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಮಗುವಿಗೆ ತಕ್ಕಡಿ ತೂಕದ ಬಟ್ಟಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.