ಜಿಲ್ಲೆ

ಜು.27ರಿಂದ ಆರುದಿನ ನಗರದಲ್ಲಿ ನಾಟಕೋತ್ಸವ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

ಮಂಡ್ಯ: ಕರ್ನಾಟಕ ಸಂಘದಿಂದ ನಗರದ ಪಿಇಎಸ್ ಕಾಲೇಜಿನ ಸ್ವಾಮಿವಿವೇಕಾನಂದ ರಂಗಮಂದಿರದಲ್ಲಿ ಜು.27ರಿಂದ ಆರು ದಿನ ನಾಟಕೋತ್ಸವ ಆಯೋಜಿಸಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.

ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಜೀವನಧಾರಿತ ‘ನಿತ್ಯಸಚಿವ’ ನಾಟಕವು ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ರಾಜಕೀಯ ಮುತ್ಸದ್ಧಿಯೊಬ್ಬರನ್ನು ಕುರಿತಾದ ರಚನೆಯಾಗಿರುವ ಮೊದಲ ನಾಟಕ ಇದಾಗಿದೆ. ಜನದನಿ ತಂಡವು ನಾಟಕವನ್ನು ಪ್ರಸ್ತುತಪಡಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಂಕರಗೌಡರ ಜೀವನದ ಘಟನಾವಳಿಗಳನ್ನು ಪ್ರೊ.ರಾಜಪ್ಪ ದಳವಾಯಿ ಅವರು ರಂಗರೂಪಕ್ಕೆ ತಂದಿದ್ದಾರೆ. ರಂಗನಿರ್ದೇಶಕ ಪ್ರಮೋದ್ ಶಿಗ್ಗಾಂವ್ ನಿರ್ದೇಶನ ಮಾಡಿದ್ದಾರೆ. ವೈ.ಎಂ.ಹನುಮಂತ್ ಸಂಗೀತ ನಿರ್ದೇಶನ ಮಾಡಿದ್ದು, ಗುರುಮೂರ್ತಿ ವರದಮೂಲ ಅವರ ರಂಗಸಜ್ಜಿಗ, ಎಚ್.ಆರ್.ಅರ್ಪಿತಾ ಅವರ ರಂಗನಿರ್ವಹಣೆಯು ಈ ನಾಟಕಕ್ಕಿದೆ. ನಾಟಕವು ಜು.27, 28ರಂದು ಎರಡು ದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಉಳಿದಂತೆ ಜು.29ರಂದು ರಾಜಸೂಯಯಾಗ ಅಥವಾ ಜರಾಸಂಧ ವಧೆ ಮೂಡಲಪಾಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಭಾಗವತರಾದ ಶಿವಣ್ಣ ನೊಣವಿನಕೆರೆ ಅವರ ಭಾಗವತಿಕೆ, ಪ್ರಮೋದ್ ಶಿಗ್ಗಾಂವ್ ಅವರ ವಸ್ತ ವಿನ್ಯಾಸದಲ್ಲಿ ನಾಗಮಂಗಲ ತಾಲೂಕು ಬಿ.ಜಿ.ನಗರದ ಆದಿಚುಂಚನಗಿರಿ ಮಾದರಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಪ್ರಸ್ತುತಪಡಿಸುವರು ಎಂದು ವಿವರಿಸಿದರು.

ಜು.30ರಂದು ಕರಿಭಂಟನಕಾಳಗ ಮೂಡಲಪಾಯ ಯಕ್ಷಗಾನ ಪ್ರಸಂಗವನ್ನು ರವೀಂದ್ರ ತಲಕಾಡು ಅವರ ಭಾಗವಿಕೆಯಲ್ಲಿ ಮಂಡ್ಯ ತಾಲೂಕು ಬೇಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸುವರು. ಜು.31ರಂದು ರನ್ನನ ಗಧಾಯುದ್ಧ ಘಟ್ಟದ ಕೋರೆ ಮೂಡಲಪಾಯ ಯಕ್ಷಾನ ಪ್ರಸಂಗ ಪ್ರಸ್ತುತಗೊಳ್ಳಲಿದೆ. ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತಿನ ಕಲಾವಿದರು ಯಕ್ಷಗಾನ ಪ್ರಸಂಗವನ್ನು ಅಭಿನಯಿಸುವರು. ಆ.1ರಂದು ಕುವೆಂಪು ರಚನೆಯ ಬೊಮ್ಮನಹಳ್ಳಿಯ ಕಿಂದರಜೋಗಿ ನಾಟಕವನ್ನು ಮಂಡ್ಯದ ಸದ್ವಿದ್ಯಾ ಶಾಲಾ ರಂಗ ತಂಡದ ವಿದ್ಯಾರ್ಥಿಗಳು ರಂಗದ ಮೇಲೆ ಪ್ರಸ್ತುತಪಡಿಸುವರು. ಅಜಯ ನಿನಾಸಂ ಅವರು ಈ ನಾಟಕಕ್ಕೆ ರಂಗರೂಪ ನೀಡಿ, ವಿನ್ಯಾಸದೊಂದಿಗೆ ನಿರ್ದೇಶನ ಮಾಡಿದ್ಧಾರೆ. ಸತೀಶ್ ಪುರಪ್ಪೇಮನೆ ಕೈಚಳಕದ ರಂಗಸಜ್ಜಿಕೆ, ಪ್ರಮೋದ್ ಶಿಗ್ಗಾಂವ್ ಅವರ ವಸ್ತವಿನ್ಯಾಸವಿದೆ ಎಂದು ಹೇಳಿದರು.

ಕರ್ನಾಟಕ ಸಂಘದ ಪದಾಧಿಕಾರಿಗಳಾದ ಹನಕೆರೆ ನಾಗಪ್ಪ, ಎಚ್.ಡಿ.ಸೋಮಶೇಖರ್ ಹಾಜರಿದ್ದರು.