ಜಿಲ್ಲೆ

8 ತಿಂಗಳ ಕಂದಮ್ಮನ ಬಿಟ್ಟು ಸಾವಿನ ಕದ ತಟ್ಟಿದ ಗೃಹಿಣಿ: ಪಿಡಿಒ ಗಂಡ ಮತ್ತು ಮಾವನ ವಿರುದ್ಧ ಗಂಭೀರ ಆರೋಪ

arunakunigal

ಕೊಳ್ಳೇಗಾಲ: ಪಟ್ಟಣದ ಬಸ್ತಿಪುರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಈ ಸಂಬಂಧ ಮೃತಳ ತಂದೆ ನೀಡಿದ ದೂರಿನ ಅನ್ವಯ ಪಿಡಿಒ ಮತ್ತು ಆತನ ತಂದೆಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮ ಮೂಲದ ವಿದ್ಯಾಶ್ರೀ(24) ಮೃತರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮ ಮೂಲದ ಪಿಡಿಒ ಆನಂದ ಶ್ಯಾಮ ಕಾಂಬ್ಳೆ ಹಾಗೂ ಈತನ ತಂದೆ ಶ್ಯಾಮ ಕಾಂಬಳೆ ಬಂಧಿತರು. ಆನಂದ ಶ್ಯಾಮ ಕಾಂಬ್ಳೆ ಮತ್ತು ವಿದ್ಯಾಶ್ರೀ 2019ರ ಜುಲೈ 11ರಂದು ವಿವಾಹವಾಗಿದ್ದರು. 3 ವರ್ಷಗಳಿಂದ ಕೊಳ್ಳೇಗಾಲ ಪಟ್ಟಣದ ಬಸ್ತಿಪುರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಗೆ 8 ತಿಂಗಳ ಹೆಣ್ಣು ಮಗುವಿದೆ.

ಸೋಮವಾರ ರಾತ್ರಿ ಮನೆಯಲ್ಲಿ ವಿದ್ಯಾಶ್ರೀ ಮೃತದೇಹ ನೇಣುಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡ ಆನಂದ್​ ಮತ್ತು ಮಾವ ಮೃತಳ ತಂದೆಗೆ ಫೋನ್​ ಮಾಡಿ ತಿಳಿಸಿದ್ದಾರೆ. ಮಂಗಳವಾರ ಬಸ್ತಿಪುರಕ್ಕೆ ಧಾವಿಸಿದ ಮೃತಳ ಪಾಲಕರು, ಇದು ಆತ್ಮಹತ್ಯೆಯಲ್ಲ. ವಿದ್ಯಾಶ್ರೀಗೆ ವರದಕ್ಷಿಣೆ ಕಿರುಕುಳ ನೀಡಿ ಪತಿ ಮತ್ತು ಮಾವ ಇಬ್ಬರೂ ಸೇರಿಕೊಂಡು ಹೊಡೆದು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮೃತಳ ತಂದೆ ಚಿದಾನಂದ ವಿಠ್ಠಲ ಕಾಂಬ್ಳೆ ಕೊಟ್ಟ ದೂರಿನ ಮೇರೆಗೆ ಕೊಳ್ಳೇಗಾಲ ಠಾಣೆಗೆ ಸಬ್​ ಇನ್ಸ್​ಪೆಕ್ಟರ್​ ಚೇತನ್​ ಆರೋಪಿಗಳನ್ನು ಬಂಧಿಸಿದ್ದಾರೆ.