ವಿಜಯವಾಣಿ ಸುದ್ದಿಜಾಲ ಉಡುಪಿ
ರಸ್ತೆಯಲ್ಲಿ ಚೆಲ್ಲಿದ್ದ ಡಾಂಬರ್ನಲ್ಲಿ ಸಿಲುಕಿಕೊಂಡು, ಮೇಲೇಳಲು ಆಗದೆ ಅಸಹಾಯಕ ಸ್ಥಿತುಯಲ್ಲಿದ್ದ ನಾಯಿಯೊಂದನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಹಾಗೂ ಹರೀಶ್ ಉದ್ಯಾವರ ಅವರು ಬಹಳ ಶ್ರಮದಿಂದ ರಕ್ಷಿಸಿದಾರೆ.
ಆದಿಉಡುಪಿಯ ಸಂತೆ ಮಾರ್ಕೆಟ್ ಬಳಿ ಇದ್ದ ಡಾಂಬರ್ ಗೋದಾಮಿನಲ್ಲಿ ಕೆಲವು ಡಬ್ಬಗಳಿಂದ ಡಾಂಬರ್ ಸೋರಿಕೆಯಾಗಿ ಸುತ್ತಮುತ್ತ ಪಸರಿಸಿತ್ತು. ಆ ರಸ್ತೆ ಮಾರ್ಗದಲ್ಲಿ ಬಂದ ನಾಯಿಯೊಂದು ತಿಳಿಯದೇ ಸೋರಿಕೆಯಾದ ಡಾಂಬರ್ನಲ್ಲಿ ಬಿದ್ದು, ದೇಹಪೂರ್ತಿ ಅಂಟಿಕೊಂಡಿದ್ದರಿಂದ ಮೇಲೆ ಏಳಲಾಗದೆ ಮೂರ್ನಾಲ್ಕು ದಿನದಿಂದ ಅಲ್ಲಿಯೇ ಒದ್ದಾಡುತ್ತಿತ್ತು.
ಮಾಹಿತಿ ತಿಳಿದ ವಿಶುಶೆಟ್ಟಿ ಹಾಗೂ ಹರೀಶ್ ಉದ್ಯಾವರ ಅವರು ಸ್ಥಳಕ್ಕೆ ಆಗಮಿಸಿ, ಡಬ್ಬಿಗಳ ನಡುವೆ ಡಾಂಬರ್ನಲ್ಲಿ ಸಿಲುಕಿದ್ದ ನಾಯಿಯ ರಕ್ಷಣಾ ಕಾರ್ಯಾಚರಣೆ ನಡೆಸಿದರು. ನೆಲಕ್ಕೆ ಡಾಂಬರ್ ಚೆಲ್ಲಿ ಗಟ್ಟಿಯಾಗಿದ್ದ ಡಬ್ಬಿಯನ್ನು ವಾಹನಕ್ಕೆ ಕಟ್ಟಿ ಎಳೆದು, ನೆಲದಿಂದ ಬಿಡಿಸಿದರು. ಬಳಿಕ ನಾಯಿಯ ದೇಹದ ಸುತ್ತ ತೆಂಗಿನಎಣ್ಣೆ ಸುರಿದು ಅಂಟಿಕೊಂಡಿದ್ದ ಡಾಂಬರ್ ತೆಗೆದು ನಾಯಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದರು.
ಡಾಂಬರ್ ವ್ಯಾಪಾರಿಗಳು ಈ ರೀತಿ ರಸ್ತೆಯಲ್ಲಿ ಡಾಂಬರ್ ಸೋರದಂತೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಹಾವು ಇನ್ನಿತರ ಮೂಕಪ್ರಾಣಿಗಳ ಜೀವಕ್ಕೆ ತೊಂದರೆ ಆಗಲಿದೆ. | ವಿಶು ಶೆಟ್ಟಿ, ಸಮಾಜ ಸೇವಕ