ಮಂಡ್ಯ: ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಅರ್ಚಕರ ಆಯ್ಕೆ ವಿಚಾರ ಸಂಬಂಧ ಎರಡು ಗುಂಪುಗಳ ನಡುವೆ ಜಟಾಪಟಿ ಶುರುವಾಗಿದ್ದು, ಸಣ್ಣಕ್ಕಿರಾಯಸ್ವಾಮಿ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಸ್ಥಳಕ್ಕೆ ಬಂದ ದೊಡ್ಡರಸಿನಕೆರೆ ಬಸಪ್ಪ, ದೇಗುಲದ ಬಾಗಿಲು ತೆಗೆಯುವಂತೆ ಗೇಟ್ ಬಳಿಯೇ ನಿಂತಿದೆ.
ಗೇಟ್ ಬಳಿಯೇ 24 ತಾಸಿನಿಂದ ನಿಂತಿರುವ ದೇವರ ಬಸಪ್ಪ, ನೀರು-ಮೇವನ್ನೂ ಸೇವಿಸಿಲ್ಲ. ಗ್ರಾಮಸ್ಥರು ಎಷ್ಟೇ ಮನವೊಲಿಸಿದರೂ ಜಾಗ ಬಿಟ್ಟು ಕದಲುತ್ತಿಲ್ಲ. ದೇಗುಲದ ಬಾಗಿಲು ತೆಗೆಯುವಂತೆ ಕೊಂಬಿನ ಮೂಲಕ ಸೂಚನೆ ಕೊಡುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ಸುಮ್ಮನಿದ್ದಾರೆ. ಪವಾಡಗಳಿಗೆ ಪ್ರಸಿದ್ಧವಾಗಿರುವ ಬಸಪ್ಪ ದೇಗುಲದ ಗೇಟ್ ಬಳಿ ತಾಸುಗಟ್ಟಲೆ ನಿಂತರೂ ಬಾಗಿಲು ಓಪನ್ ಮಾಡಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.