ಮಾಜಿ ಮುಖ್ಯಮಂತ್ರಿ ಜೆ.ಎಚ್​. ಪಟೇಲ್​ 96ನೇ ಜಯಂತಿ ಹಾಗೂ ಚುನಾವಣಾ ಸುಧಾರಣೆಯಿಂದ ಸಮಾಜದ ಸುಧಾರಣೆ ಕುರಿತ ಚಿಂತನ ಮಂಥನ ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. folder
ಜಿಲ್ಲೆ

ಚುನಾವಣಾ ಸಮಗ್ರ ಸುಧಾರಣೆಗಾಗಿ ಚರ್ಚೆ ಅಗತ್ಯ

ರಾಜಕೀಯ ಅವ್ಯವಸ್ಥೆಯಿಂದ ರಾಜಕಾರಣಿಗಳೆಲ್ಲ ಭ್ರಷ್ಟರಾಗಿಬಿಟ್ಟಿದ್ದಾರೆ. ಚುನಾವಣಾ ವ್ಯವಸ್ಥೆಯ ಸಮಗ್ರ ಸುಧಾರಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಪ್ರಾಮಾಣಿಕ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

* ಪ್ರಾಮಾಣೀಕರಿಗೆ ರಾಜಕೀಯ ಪ್ರವೇಶ ಕಷ್ಟ

* ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತ

* ಜೆ.ಎಚ್​. ಪಟೇಲ್​ 96ನೇ ಜಯಂತಿ

ಬೆಂಗಳೂರು: ರಾಜಕೀಯ ಅವ್ಯವಸ್ಥೆಯಿಂದ ರಾಜಕಾರಣಿಗಳೆಲ್ಲ ಭ್ರಷ್ಟರಾಗಿಬಿಟ್ಟಿದ್ದಾರೆ. ಚುನಾವಣಾ ವ್ಯವಸ್ಥೆಯ ಸಮಗ್ರ ಸುಧಾರಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಪ್ರಾಮಾಣಿಕ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಜೆ.ಎಚ್​.ಪಟೇಲ್​ ಪ್ರತಿಷ್ಠಾನ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್​. ಪಟೇಲ್​ 96ನೇ ಜಯಂತಿ ಹಾಗೂ ಚುನಾವಣಾ ಸುಧಾರಣೆಯಿಂದ ಸಮಾಜದ ಸುಧಾರಣೆ ಕುರಿತ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚೆಯಾಗಬೇಕು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಆಗಬೇಕು. ಇದರಿಂದ ಚುನಾವಣೆಯಲ್ಲಿ ಹಣದ ದುರ್ಬಳಕೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈಗ ಚುನಾವಣೆ ಸಂದರ್ಭದಲ್ಲಿ ಹಣ, ಜಾತಿ, ಹೆಂಡ, ಧರ್ಮದ ಪ್ರಭಾವ ಹೆಚ್ಚಾಗಿದೆ. ಪ್ರಾಮಾಣಿಕರು, ಬಡವರು, ಬುದ್ಧಿವಂತರು, ಸಮಾಜ ಸೇವಕರು ರಾಜಕೀಯ ಪ್ರವೇಶ ಮಾಡುವುದು ಕಷ್ಟ. ಚುನಾವಣೆ ಸುಧಾರಣೆ ಯಾವುದೇ ಒಂದು ಪಕ್ಷ, ವ್ಯಕ್ತಿಗೆ ಸಂಬಂಧಿಸಿದಲ್ಲ. ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ. ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಚರ್ಚಿಸಬೇಕು ಎಂದರು.

ಮೊದಲ ಬಾರಿಗೆ ವಿಧಾನಸಭಾ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಆಯೋಗ ನಿಗಧಿಪಡಿಸಿದ್ದ ವೆಚ್ಚವನ್ನಷ್ಟೇ ಖರ್ಚು ಮಾಡಲಾಗುತ್ತಿತ್ತು. ಚುನಾವಣೆ ಕೊನೆಗೊಳ್ಳುವರೆಗೆ ಎಷ್ಟು ಖರ್ಚು ಆಗಿದೆ ಎಂಬುದರ ಬಗ್ಗೆ ಈಗ ಲೆಕ್ಕವೇ ಸಿಗದಂತಾಗಿದೆ ಎಂದು ತಿಳಿಸಿದರು.

ವಿ.ಪಿ. ಸಿಂಗ್​ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದಿನೇಶ್​ ಗೋಸ್ವಾಮಿ ಸಮಿತಿ, ಪಿ.ವಿ. ನರಸಿಂಹರಾವ್​ ಅವಧಿಯಲ್ಲಿ ಎನ್​.ಎನ್​. ವೋಹ್ರಾ ಸಮಿತಿ ಹಾಗೂ ಅಟಲ್​ ಬಿಹಾರಿ ವಾಜಪೇಯಿ ಅವಧಿಯಲ್ಲಿ ಇಂದ್ರಜಿತ್​ ಗುಪ್ತಾ ಸಮಿತಿ ರಚಿಸಲಾಗಿತ್ತು. ಸಮಿತಿಗಳು ನೀಡಿದ್ದ ಶಿಫಾರಸು ಸಮಗ್ರವಾಗಿ ಜಾರಿಗೆ ತಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರಬಹುದಾಗಿತ್ತು ಎಂದರು.

ಪ್ರಜಾಪ್ರಭುತ್ವದ ಜತೆಗೆ ಸಾಮಾಜಿಕ, ಆರ್ಥಿಕ ಸಮಾನತೆ ಮುಖ್ಯ. ಸಮಾಜದಲ್ಲಿ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ ಮುಂದುವರಿದಾಗ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವುದು ಸಾಮಾಜಿಕ ಬದಲಾವಣೆಯ ಪ್ರಮುಖ ಭಾಗವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪಟೇಲರು ಸರಳ, ಧೈರ್ಯಶಾಲಿ, ನೇರ ನಡೆ-ನುಡಿಯ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದರು. ಬೇರೆಯವರ ಏಳಿಗೆಯನ್ನು ಕಂಡು ಅಸೂಯೆ ಪಡದೆ ಪ್ರೋತ್ಸಾಹಿಸುತ್ತಿದ್ದರು. ನನ್ನ ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿಯೂ ಪಟೇಲರು ತಮಗೆ ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿದರು.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಸೋಮಶೇಖರ್​, ಮಾಜಿ ಎಂಎಲ್ಸಿ ಮೋಹನ್​ ಕೊಂಡಜ್ಜಿ, ಮಾಜಿ ಶಾಸಕರಾದ ಮಹಿಮ ಪಟೇಲ್​, ಎಂ.ಪಿ.ನಾಡಗೌಡ, ಎಚ್​.ಎಸ್​.ಶಿವಶಂಕರ್​, ನಂಜಯ್ಯನಮಠ, ಅದಮ್ಯ ಚೇತನ ೌಂಡೇಶನ್​ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್​, ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಟಿ.ಪ್ರಭಾಕರ್​, ಜೆಡಿಯು ಯುವ ಟಕದ ರಾಜ್ಯಾಧ್ಯಕ್ಷ ಡಾ.ನಾಗರಾಜ್​ ಮತ್ತಿತರರು ಉಪಸ್ಥಿತರಿದ್ದರು.

ಆ ಧೈರ್ಯ ಯಾರಿಗೂ ಬರಲು ಸಾಧ್ಯವಿಲ್ಲ

ಪಟೇಲರು ಸದಾ ಜನರೊಟ್ಟಿಗೆ ಇದ್ದು ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು. ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಲು ಪ್ರಧಾನಿ ಕಚೇರಿಯಲ್ಲಿ ಚರ್ಚೆ ಆದಾಗ, ಸ್ಥಳದಲ್ಲಿದ್ದವರು "ಇದು ಇಲ್ಲಿ ಆಗುವ ತೀಮಾರ್ನವಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ' ಎಂದಿದ್ದರು. ಪಟೇಲರಿಗಿದ್ದ ಧೈರ್ಯ ಇವತ್ತಿನ ಪರಿಸ್ಥಿತಿಗೆ ಯಾರಿಗೂ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪಿ.ಜಿ.ಆರ್​. ಸಿಂಧ್ಯ ಹೇಳಿದರು.