ಮೈಸೂರು: ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಕೊತಿಯೊಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ಬಂದಿದ್ದ ಭಕ್ತನನ್ನು ಗೋಳೋಯ್ದು ಕೊಂಡಿದೆ. ಆತನ ಬ್ಯಾಗ್ ಕಸಿದು 30 ನಿಮಿಷಕ್ಕೂ ಹೆಚ್ಚು ಕಾಲ ಇನ್ನಿಲ್ಲದಂತೆ ಕಾಡಿ, ಕೊನೆಗೆ ಬ್ಯಾಗ್‌ನಲ್ಲಿ ಎಲ್ಲ ವಸ್ತುಗಳನ್ನು ವಾಪಾಸ್ ನೀಡಿದೆ. ಸದ್ಯ ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಸನದಿಂದ ಬಂದ ಕುಟುಂಬವೊಂದು ದೇವಿಯ ದರ್ಶನ ಪಡೆಯಲು ಬೆಟ್ಟದ ಮೆಟ್ಟಿಲು ಮಾರ್ಗದಲ್ಲಿ ಸಾಗಲು ಸಜ್ಜಾಗಿದ್ದರು. ಬೆಟ್ಟದ ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಲಿದ್ದ ಪರ್ಸ್ ಕಸಿದುಕೊಂಡ ಕೋತಿ ಮರವೇರಿದೆ. ಈ ವೇಳೆ ಅಲ್ಲಿಯೇ ಇದ್ದ ಜನರು ಗದರಿದರೂ ಲೆಕ್ಕಿಸದೇ ಮರ ಏರಿ ಕುಳಿತಿದೆ.
ಬಳಿಕ ಪರ್ಸ್‌ನಲ್ಲಿದ್ದ ಒಂದೊಂದೇ ಪದಾರ್ಥಗಳನ್ನ ಕೆಳಗೆ ಎಸೆದ ವಾನರ ಕೊನೆಗೆ ಮೊಬೈಲ್ ಒಂದನ್ನು ಎಸೆಯದೇ ತನ್ನ ಕೈಯಲ್ಲಿ ಹಿಡಿದು 30 ನಿಮಿಷಗಳ ಕಾಲ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಭಕ್ತರನ್ನು ಪೇಚಿಗೆ ಸಿಲುಕಿಸಿತು.
ಈ ವೇಳೆ ಅಲ್ಲಿಯೇ ಇದ್ದ ಕೆಲವರು ಮಂಗನಿಗೆ ಬಾಳೆಹಣ್ಣು ನೀಡುವ ಮೂಲಕ ಆಮಿಷ ವೊಡ್ಡಿದರು. ಅದಕ್ಕೂ ಜಗ್ಗದ ಮಂಗ ತನ್ನ ಚೇಷ್ಠೆಯನ್ನ ಮುಂದುವರೆಸಿ ಕೊನೆಗೆ ಜನರ ಕಡೆಗೆ ಮೊಬೈಲ್ ಎಸೆಯಿತು. ಕೊನೆಗೂ ಕೋತಿಯಿಂದ ಮರಳಿ ಮೊಬೈಲ್ ಪಡೆದ ಭಕ್ತರು ನೆಮ್ಮದಿಯಿಂದ ದೇವಿಯ ದರ್ಶನಕ್ಕೆ ತೆರಳಿದರು.