ಜಿಲ್ಲೆ

ಬೀಡಿ ಮೇಲಿನ ಶೇ.28 ಜಿಎಸ್‌ಟಿ ಶೇ.5ಕ್ಕೆ ಇಳಿಸಲು ಒತ್ತಾಯ, ಕಾರ್ಮಿಕ ಸಂಘಟನೆಗಳ ನಿಯೋಗದಿಂದ ಮುಖ್ಯಮಂತ್ರಿ ಭೇಟಿ

ಮಂಗಳೂರು: ಕರ್ನಾಟಕ ರಾಜ್ಯದ 5 ಲಕ್ಷ ಬೀಡಿ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಬೀಡಿ ಉದ್ಯಮಕ್ಕೆ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಶೇ.28ರಿಂದ ಶೇ.5ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ (ಎಚ್‌ಎಂಎಸ್) ಮತ್ತು ಬೀಡಿ ಮಜ್ದೂರ್ ಸಂಘ (ಬಿಎಂಎಸ್)ದ ಜಂಟಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಬೆಳಗಾವಿ ಅಧಿವೇಶನ ಸಂದರ್ಭ ಭೇಟಿಯಾಗಿ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೀಡಿ ಕಾರ್ಮಿಕರ ಪರವಾಗಿ ನಿಲ್ಲುತ್ತಾರೆ ಎಂದು ವಿಶ್ವಾಸ ಹೊಂದಿರುವುದಾಗಿ ನಗರದಲ್ಲಿ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಮಹಮ್ಮದ್ ರಫಿ ಮತ್ತು ಮತ್ತು ಬೀಡಿ ಮಜ್ದೂರ್ ಸಂಘದ ಅಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ ಮಂಗಳವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೇ. 28 ಜಿಎಸ್‌ಟಿ ವಿಧಿಸಿರುವುದು ಉದ್ಯಮ ನಡೆಸುವವರು ತೆರಿಗೆ ವಂಚಿಸಲು ಪ್ರೇರಣೆ ನೀಡಿದಂತೆ ಆಗಿದೆ. ದೊಡ್ಡ ಸಂಖ್ಯೆಯ ಬೀಡಿ ಕಾರ್ಮಿಕರಿಗೆ ನೋಂದಾಯಿತರಲ್ಲದ ತಯಾರಕರು ಕೆಲಸ ನೀಡುತ್ತಿದ್ದಾರೆ. ನೋಂದಣಿಗೊಳ್ಳದ ಬೀಡಿ ಮಾಲೀಕರು ತಮ್ಮ ಅಧೀನದಲ್ಲಿ ದುಡಿಯುವ ಕಾರ್ಮಿಕರಿಗೆ ಅತೀ ಕಡಿಮೆ ವೇತನ ನೀಡುತ್ತಾರೆ. ಅಲ್ಲದೆ ಭವಿಷ್ಯ ನಿಧಿ ಸಹಿತ ವಿವಿಧ ಸರ್ಕಾರಿ ಸೌಲಭ್ಯಗಳಿಂದ ಇಂತಹ ಕಾರ್ಮಿಕರು ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚೆಗೆ ಬಂದ ಮಾಧ್ಯಮ ವರದಿಗಳ ಪ್ರಕಾರ, ಜಿಎಸ್‌ಟಿ ಕೌನ್ಸಿಲ್‌ನ ಉಪಸಮಿತಿಯು (ಜಿಒಎಂ) ತಂಬಾಕು. ಉತ್ಪನ್ನಗಳ ಜಿಎಸ್‌ಟಿ ದರವನ್ನು ಶೇ.28 ರಿಂದ ಶೇ.35 ಹೆಚ್ಚಿಸಲು ಶಿಫಾರಸು ಮಾಡಿದೆ. ದೇಶದ ಉದ್ದಗಲಕ್ಕೂ ಬೀಡಿ ಉದ್ಯಮ ಸೃಷ್ಟಿಸಿದ ಉದ್ಯೋಗ ಅವಕಾಶಗಳನ್ನು ಪರಿಗಣಿಸಿ, ಅನೇಕ ರಾಜ್ಯಗಳಲ್ಲಿ ವ್ಯಾಟ್ ಆಡಳಿತದ ಕಾಲದಲ್ಲಿ ಈ ಉದ್ಯಮಕ್ಕೆ ತೆರಿಗೆ ವಿಧಿಸಿರುವುದಿಲ್ಲ ಎಂದು ಮಹಮ್ಮದ್ ರಫಿ ವಿವರಿಸಿದರು.

ಸಂಘಟನೆ ಮುಖಂಡರಾದ ನಳಿನ್ ಅಡ್ಯಾರ್, ಹರೀಶ್, ಟಿ.ಎಚ್.ಮೊಹಮ್ಮದ್, ಪದ್ಮಾವತಿ, ಗೋಪಾಲಕೃಷ್ಣ ಉಪಸ್ಥಿತರಿದ್ದರು.