ರಬಕವಿ ಹಜಾರೆ ಟೆಕ್ಸ್‌ಟೈಲ್ ಆವರಣದಲ್ಲಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ನೇತೃತ್ವದ ನಿಯೋಗವನ್ನು ಭಾನುವಾರ ಬೀಳ್ಕೊಡಲಾಯಿತು. ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಡಾ. ರವಿ ಜಮಖಂಡಿ ಇದ್ದರು. 
ಜಿಲ್ಲೆ

ದೆಹಲಿಗೆ ತೆರಳಿದ ಹೋರಾಟ ಸಮಿತಿ ನಿಯೋಗ

ರಬಕವಿ/ಬನಹಟ್ಟಿ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಪರಿಹಾರವಾಗಿದ್ದರೂ ಕುಂಟುತ್ತ ಸಾಗಿರುವ ಕಾಮಗಾರಿಗೆ ವೇಗ ಕಲ್ಪಿಸಿ ಶೀಘ್ರ ಮುಕ್ತಾಯಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟಗಾರರ ನಿಯೋಗ ದೆಹಲಿಗೆ ತೆರಳಿತು.

ರಬಕವಿಯ ಹಜಾರೆ ಟೆಕ್ಸ್‌ಟೈಲ್ಸ್ ಆವರಣದಿಂದ ಭಾನುವಾರ ಮಧ್ಯಾಹ್ನ ಪುಣೆ ಮಾರ್ಗವಾಗಿ ನಿಯೋಗ ದೆಹಲಿಗೆ ತೆರಳುವ ಮುನ್ನ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಮಾತನಾಡಿ, 13 ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ರೈಲ್ವೆ ಮಾರ್ಗ ನಿರ್ಮಾಣಕ್ಕೆ ವಿಳಂಬ ಧೋರಣೆಗೆ ಧರಣಿ ಸತ್ಯಾಗ್ರಹ, ಪತ್ರ ಚಳವಳಿ, ಅರೆಬೆತ್ತಲೆ ಮೆರವಣಿಗೆ ಸೇರಿ ಎಲ್ಲ ರೀತಿಯ ಹೋರಾಟಗಳು ನಡೆದಿವೆ. ಆದರೂ ರೈಲು ಮಾರ್ಗ ನಿರ್ಮಾಣಕ್ಕೆ ಹಿನ್ನಡೆಯಾಗಿರುವುದು ಬೇಸರ ತಂದಿದೆ ಎಂದರು.

ವಿಳಂಬ ನೀತಿಯಿಂದ ಯೋಜನೆಯು 4 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ. ಅತಿ ಶೀಘ್ರ ಜಿಲ್ಲಾದ್ಯಂತ ಏಕಕಾಲಕ್ಕೆ ಪ್ರತಿ 20 ಕಿ.ಮೀ.ಗೆ ಒಬ್ಬ ಗುತ್ತಿಗೆದಾರನಂತೆ ತುಂಡು ಗುತ್ತಿಗೆ ನೀಡಿ ಒಂದು ವರ್ಷದ ಕಾಲಮಿತಿ ಅಳವಡಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಸದರಿ ಮಾರ್ಗ 142 ಕಿ.ಮೀ.ನಷ್ಟಿದೆ. 2010 ರಲ್ಲಿ ಕಾಮಗಾರಿ ಚಾಲನೆಗೊಂಡಿದೆ. ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ ಸಂಪೂರ್ಣಗೊಂಡಿದೆ. ಲೋಕಾಪುರದವರೆಗೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಇಲ್ಲಿವರೆಗೆ 42 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ಲೋಕಾಪುರದವರೆಗೆ ತುಂಡು ಗುತ್ತಿಗೆ ನೀಡಿರುವ ಬಗ್ಗೆ ಮಾಹಿತಿ ಇದ್ದು, ಅಗತ್ಯವಿರುವ 3200 ಎಕರೆ ಜಮೀನಿನ ಪೈಕಿ 21 ಎಕರೆ ಜಮೀನು ಹೊರತುಪಡಿಸಿ ಉಳಿದ ಭೂಮಿ ಸ್ವಾಧೀನಪಡಿಸಿಕೊಂಡು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ. ಆದರೂ ಗೊಂದಲ ಗೂಡಿನಲ್ಲಿಯೇ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ನನ್ನನ್ನು ನಾನು ಹಿಂಸಿಸಿಕೊಂಡಾಗ ಮಾತ್ರ ದೇಶ, ನಾಡಿಗೆ ಏನಾದರೂ ಕೊಡುಗೆ ಕೊಡಲು ಸಾಧ್ಯ. ಅವರಿವರ ಮೇಲೆ ಜವಾಬ್ದಾರಿ ಹಾಕಿದರೆ ಈ ಕಾಮಗಾರಿ ಮುಗಿಯಲು ಸಾಧ್ಯವಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಲು ಇಲ್ಲಿಂದ ದಿಲ್ಲಿಯವರೆಗೆ ನಿಯೋಗ ಕರೆದೊಯ್ಯುತ್ತಿರುವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸುಳ್ಳು ಹೇಳಿ ಹೋರಾಟದ ದಾರಿ ತಪ್ಪಿಸಲು ಯತ್ನಿಸುತ್ತಿವೆ. ಇದಕ್ಕೆ ಬಗ್ಗುವುದಿಲ್ಲ. ಅವಳಿ ಜಿಲ್ಲೆಯ ಜನ ನನ್ನ ಬೆಂಬಲಕ್ಕಿದ್ದಾರೆಂದರು.

ಕುತ್ಬುದ್ದೀನ್ ಖಾಜಿ, ಗಣಪತರಾವ್ ಹಜಾರೆ, ಡಾ. ರವಿ ಜಮಖಂಡಿ ಹಾಗೂ ಶ್ರೀನಿವಾಸ ಬಳ್ಳಾರಿ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನಿಯೋಗ ಸೋಮವಾರ ಭೇಟಿಯಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಪಿ.ಸಿ. ಗದ್ದಿಗೌಡರ, ಅಣ್ಣಾಸಾಹೇಬ ಜೊಲ್ಲೆ ಅವರನ್ನು ಇದೇ ಸಂದರ್ಭದಲ್ಲಿ ಭೇಟಿಯಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಖಾಜಿ ತಿಳಿಸಿದರು.

ಸುರೇಶ ಚಿಂಡಕ, ರಾಮಣ್ಣ ಹುಲಕುಂದ, ಪ್ರಸನ್ನ ಹಜಾರೆ, ಧರೆಪ್ಪ ಉಳ್ಳಾಗಡ್ಡಿ, ರಾಜು ಜಾಲಿಗಿಡದ, ಶ್ರೀಶೈಲ ದಲಾಲ, ಪ್ರವೀಣ ಹಜಾರೆ, ಈರಪ್ಪ ಹಿಪ್ಪರಗಿ, ವಜ್ರಕಾಂತ ಕಮತಗಿ ಇತರರಿದ್ದರು.