ಜಿಲ್ಲೆ

ನದಿ ಜೋಡಣೆ ವಿರೋಧಿಸಿ ಕಾಗೇರಿ ನೇತೃತ್ವದಲ್ಲಿ ಸಿಎಂ ಭೇಟಿಯಾದ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ

ಶಿರಸಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಯನ್ನು ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ಅನಂತ ಅಶೀಸರ ಅವರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ನೀಡಿ ಆಗ್ರಹಿಸಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದ ನಿಯೋಗ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ರೂಪಿಸಿ ಜಾರಿ ಮಾಡಲು ಮುಂದಾಗಿದೆ. ಈಗಾಗಲೇ ಸಾಧ್ಯತಾ ವರದಿ ಯನ್ನು ರಾಜ್ಯ ಜಲಸಂಪನ್ಮೂಲ ಇಲಾಖೆ ಸಿದ್ದಪಡಿಸಿಕೊಂಡಿದೆ. ಈ ಸಂದರ್ಭದಲ್ಲಿ ಬೇಡ್ತಿ ಹಾಗೂ ಅಘನಾಶಿನಿ ಕಣಿವೆಯ ಜನತೆ ಈ 2 ನೀರಾವರಿ ಯೋಜನೆಗಳಿಗೆ ಕಳೆದ 3 ತಿಂಗಳಿAದ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟಿದೆ.

ಬೇಡ್ತಿ-ಅಘನಾಶಿನಿ ನದಿ ಕಣಿವೆಗಳು ಪಶ್ಚಿಮ ಘಟ್ಟದ ಹೃದಯ ಭಾಗವಾಗಿದೆ. ಈ ನದಿಗಳ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ, ಕಾಲುವೆಗಳ ನಿರ್ಮಾಣ, ರಸ್ತೆ, ವಿದ್ಯುತ್ ಮಾರ್ಗ ನಿರ್ಮಾಣಗಳಿಂದ ಈ ನದಿ ಕಣಿವೆಗಳು ವಿಭಾಗವಾಗುತ್ತವೆ, ಭೂ ಕುಸಿತವಾಗುತ್ತವೆ, ಬೇಸಿಗೆಯಲ್ಲಿ ಈ ನದಿ ಕಣಿವೆಗಳಲ್ಲಿ ನೀರು ಇರುವುದಿಲ್ಲ. ಅರಣ್ಯ ವನ್ಯಜೀವಿ, ಪರಿಸರ, ಕಾಯ್ದೆ ಉಲ್ಲಂಘನೆ ಆಗಲಿದೆ. 2 ಲಕ್ಷ ಮಲೆನಾಡಿನ ಕುಟುಂಬಗಳು ಬೇಡ್ತಿ-ಅಘನಾಶಿನಿ ನದಿಯನ್ನು ಅವಲಂಬಿಸಿದ್ದು, ನದಿ ಜೋಡಣೆಯಿಂದ ಸಮಸ್ಯೆ ಎದುರಿಸಲಿದ್ದಾರೆ ಎಂದು ಆಗ್ರಹಿಸಿದೆ.

ನದಿಗಳ ಜೋಡಣೆಯಿಂದ ಕರಾವಳಿ ಜನರು, ಮೀನುಗಾರರು ನದಿಯಲ್ಲಿ ಸಿಹಿ ನೀರಿಲ್ಲದೇ ಉಪ್ಪು ನೀರು ಕುಡಿಯುವ ಪರಿಸ್ಥಿತಿಗೆ ತಲುಪಿದ್ದಾರೆ. ಮೀನುಗಾರರು ಮೀನುಬರದಿಂದ ಅತಂತ್ರರಾಗುತ್ತಾರೆ. ನದಿ ತಿರುವಿನಿಂದಾಗುವ ಸಮಸ್ಯೆಗಳು ಮಲೆನಾಡಿನ ರೈತರನ್ನು ನಿದ್ದೆಗೆಡಿಸಿವೆ. ಅಲ್ಲದೇ ನದಿ ತಿರುವು ಯೋಜನೆಯಿಂದ ಈಗಾಗಲೇ ನಿರ್ಮಿಸಲಾಗಿರುವ ಒಟ್ಟೂ 35 ಸಾವಿರ ಕೋಟಿ ರೂ.ಗಳ ನೀರಾವರಿ ಯೋಜನೆಗಳು ವ್ಯರ್ಥವಾಗಲಿವೆ. ಈ ಹಿನ್ನೆಲೆಯಲ್ಲಿ ಸ್ವರ್ಣವಲ್ಲಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಡಿಯಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಜನರು ಈ ಯೋಜನೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸುತ್ತಿದ್ದಾರೆ. ಪಂಚಾಯಿತಿ, ಸಹಕಾರಿ ಸಂಘಗಳಲ್ಲಿ, ರೈತ ಒಕ್ಕೂಟಗಳಲ್ಲಿ ಜಾಥಾ, ಪಾದಯಾತ್ರೆ ನಡೆಸಿ ಬೇಡ್ತಿ ಅಘನಾಶಿನಿ ತಿರುವು ಯೋಜನೆ ನಿಲ್ಲಿಸಿ ಎಂದು ನಿರ್ಣಯ ಕೈಗೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರ ಜಲಸಂಪನ್ಮೂಲ ಇಲಾಖೆ ಬೇಡ್ತಿ-ವರದಾ ಜೋಡಣೆ ಯೋಜನೆಯ ಡಿ.ಪಿ.ಆರ್ ಮಾಡಲು ಮುಂದಾಗಬಾರದು ಹಾಗೂ ಅಘನಾಶಿನಿ-ವೇದಾವತಿ ಯೋಜನೆಯ ಡಿ.ಪಿ.ಆರ್ ತಯಾರಿಗೆ ಒಪ್ಪಿಗೆ ನೀಡಬಾರದು. ಬೇಡ್ತಿ ಮತ್ತು ಅಘನಾಶಿನಿ ಕಣಿವೆಗಳಲ್ಲಿ ಬೃಹತ್ ನೀರಾವರಿ ಯೋಜನೆಗಳನ್ನು ಸಂಪೂರ್ಣ ಅನುಷ್ಠಾನ ಮಾಡದಂತೆ ಎಲ್ಲ ರಾಜಕೀಯ ಪಕ್ಷಗಳು, ಜನಪ್ರತಿ ನಿಧಿಗಳು, ಸಾಮಾಜಿಕ ರೈತ, ಸಹಕಾರಿ ಸಂಘಟನೆಗಳು ಆಗ್ರಹ ಮಾಡಿವೆ ಎಂದು ನಿಯೋಗ ಮುಖ್ಯಮಂತ್ರಿಗೆ ಮನವರಿಕೆ ಮಾಡಿದೆ.

ನಿಯೋಗದಲ್ಲಿ ಶಾಸಕ ಶಾಂತಾರಾಮ ಸಿದ್ದಿ, ಪರಿಸರ ತಜ್ಞರಾದ ಡಾ. ಬಾಲಚಂದ್ರ ಸಾಯೀಮನೆ, ಸ್ಕೊಡ್ವೆಸ್ ಸಂಸ್ಥೆಯ ಡಾ. ವೆಂಕಟೇಶ ನಾಯ್ಕ, ಗಣಪತಿ ಬಿಸಲಕೊಪ್ಪ, ವಿ. ಎನ್. ಹೆಗಡೆ ಬೊಮ್ನಳ್ಳಿ ಇತರರಿದ್ದರು.