ವಿಜಯವಾಣಿ ಸುದ್ದಿಜಾಲ ಧಾರವಾಡ
ಹನ್ನೆರಡನೆ ಶತಮಾನವು ಅರಿವಿನ ಕಾಲಘಟ್ಟ. ಎಲ್ಲರೂ ತಮ್ಮ ಅರಿವಿನ ಮೂಲಕ ಬದುಕು ಕಟ್ಟಿಕೊಳ್ಳಬೇಕು. ತಮ್ಮ ತಮ್ಮ ಅರಿವೇ ಗುರುವಾಗಬೇಕು ಎಂದು ನುಡಿದ ಶರಣರ ತತ್ವಗಳನ್ನು ನಾವು ಪರಿಪಾಲಿಸಬೇಕು ಎಂದು ಡಾ. ಬಾಳಪ್ಪ ಚಿನಗುಡಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ನಿಜಸುಖಿ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಸ್ಮರಣಾರ್ಥ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಜ ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿ ಜೀವನ ದರ್ಶನ ಕುರಿತು ಅವರು ಮಾತನಾಡಿದರು.
ಕೂಡಲ ಸಂಗಮದಲ್ಲಿ ಬಸವಣ್ಣನವರ ಸಹಪಾಠಿಯಾಗಿದ್ದ ಹಡಪದ ಅಪ್ಪಣ್ಣವರ ಜ್ಞಾನವನ್ನು ಅವರು ಮೆಚ್ಚಿಕೊಂಡಿದ್ದರು. ನಾವು ಯಾರ ಸಂಘದಲ್ಲಿರುತ್ತೇವೆಯೋ ಅವರ ಸಂಸ್ಕಾರ ನಮ್ಮ ಮೇಲೆ ಆಗುತ್ತದೆ. ಬಸವಣ್ಣ ಮತ್ತು ಹಡಪದ ಅಪ್ಪಣ್ಣ ಆ ಕಾಲಘಟ್ಟದಲ್ಲಿ ಅರಿವಿನ ಶಿಖರಗಳಾಗಿದ್ದರು. ಹಡಪದ ಅಪ್ಪಣ್ಣ-ಲಿಂಗಮ್ಮನವರ ವಚನಗಳನ್ನು ಇನ್ನೂ ಆಳವಾಗಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.
ಸಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಹಡಪದ, ವೀರಣ್ಣ ಒಡ್ಡೀನ, ಮಲ್ಲಿಕಾರ್ಜುನ ಚಿಕ್ಕಮಠ, ಮಹಾಂತೇಶ ನರೇಗಲ್ಲ, ಪ್ರಮೀಳಾ ಜಕ್ಕಣ್ಣವರ, ಎಂ.ಬಿ. ಹೆಗ್ಗೇರಿ, ಭಾವಿಕಟ್ಟಿ, ಎಸ್.ಎಂ. ರಾಚಯ್ಯನವರ, ನಿಂಗಪ್ಪ ಕಾಶಪ್ಪನವರ, ಸಮಾಜದ ಹಿರಿಯರು, ಇತರರು ಇದ್ದರು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.