ತರೀಕೆರೆ: ವಿಧಾನಸಭಾ ಚುನಾವಣೆ ಪೂರ್ವ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಕಾನೂನಿನ ಅಡಿಯಲ್ಲೇ ಅನುಷ್ಠಾನಗೊಳಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಮೊದಲಿನಿಂದಲೂ ಅಭಿವೃದ್ಧಿ ಮಂತ್ರವನ್ನೇ ಜಪಿಸುವ ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿಗಳಾದ ದೇವರಾಜು ಅರಸು ಕಾಲದಲ್ಲಿ ಉಳುವವನಿಗೆ ಭೂಮಿಯ ಒಡೆಯರಾಗುವ ಹಕ್ಕು, ಎಸ್.ಬಂಗಾರಪ್ಪ ಅವರ ಅಧಿಕಾರಾವಧಿಯಲ್ಲಿ ಸ್ವಂತ ಸೂರಿಲ್ಲದವರಿಗೆ ಆಶ್ರಯ ಮನೆ ನೀಡಿರುವುದು ಮಾತ್ರವಲ್ಲ, ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಹಸಿದ ಹೊಟ್ಟೆಗೆ ಉಚಿತ ಅಕ್ಕಿ ವಿತರಿಸಿ ಕಾಂಗ್ರೆಸ್ ರಾಜ್ಯದ ಅಸಂಖ್ಯಾತ ಜನರ ವಿಶ್ವಾಸ ಗಳಿಸಿದೆ. ಭರವಸೆಗೆ 135 ಸ್ಥಾನ ಗೆಲ್ಲಿಸಿದ ಜನ ಕೊಟ್ಟ ಮಾತಿನಂತೆ ಅನುಷ್ಠಾನಗೊಳಿಸಿದ ಯೋಜನೆಗಾಗಿ ಹೆಚ್ಚಿನ ಬೆಂಬಲ ನೀಡುವುದಿಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಗ್ಯಾರಂಟಿ ಅನುಷ್ಠಾನಗೊಳಿಸಿದರೆ, ಬಿಜೆಪಿ ವ್ಯಕ್ತಿಯ ಹೆಸರಿನಲ್ಲಿ ಗ್ಯಾರಂಟಿ ಘೋಷಿಸಲು ಹೊರಟಿರುವುದು ಅರ್ಥಹೀನ. ಕಾರ್ಯಕರ್ತರು ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಬೇಕು. ಜತೆಗೆ ಪ್ರಾಮಾಣಿಕ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಹಗಲಿರುಳು ಶ್ರಮಿಸಬೇಕಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜನಪ್ರತಿನಿಧಿಗಳ ಜವಾಬ್ದಾರಿ ಸಮಸ್ಯೆಗೆ ಸ್ಪಂದಿಸಿ ಸೇವೆ ಮಾಡುವುದೇ ಹೊರತು ಭರವಸೆ ನೀಡುವುದಲ್ಲ. ಚುನಾವಣೆಯಲ್ಲಿ ಅಭಿವೃದ್ಧಿ ಚಿಂತನೆಯಷ್ಟೇ ಅಜೆಂಡವಾಗಬೇಕು. ಗೆಲುವಿನ ಪೈಪೋಟಿಯಲ್ಲಿ ಅನಗತ್ಯ ಟೀಕೆ. ಒಬ್ಬರ ಮೇಲೆ ಮತ್ತೊಬ್ಬರು ದೂಷಣೆ ಮಾಡಬಾರದು. ಅದಲ್ಲದೇ ಪ್ರತಿಸ್ಪರ್ಧಿಗಳ ನಡುವೆ ಆರೋಗ್ಯಕರ ಸ್ಪರ್ಧೆ ಉತ್ತಮ ಎಂದು ಹೇಳಿದರು.
10 ವರ್ಷಗಳ ಹಿಂದೆ ಸಂಸದನಾಗಿದ್ದಾಗ ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆ ಮಂಜೂರು ಮಾಡಿಸಲಾಗಿತ್ತಾದರೂ, ಈವರೆಗೆ ಕಾಮಗಾರಿ ಮುಗಿದಿಲ್ಲ. ಮತ್ತೊಮ್ಮೆ ಅವಕಾಶ ನೀಡಿದರೆ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸುವುದಲ್ಲದೇ, ಈಗಾಗಲೇ ನಷ್ಟದ ನೆಪವೊಡ್ಡಿ ಬಾಗಿಲು ಮುಚ್ಚಿರುವ ವಿಜ್ಞಾನ್ ಇಂಡಸ್ಟ್ರೀಸ್ ಜಾಗದಲ್ಲಿ ಹೊಸ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಮಾತನಾಡಿ, ಗ್ಯಾರಂಟಿ ಯೋಜನೆ ಮಹಿಳೆಯರ ಮೂಲಕ ಪುರುಷರಿಗೆ ಲಾಭ ತಂದುಕೊಟ್ಟಿದೆ. ಈ ಬಾರಿಯ ಚುನಾವಣೆ ಪ್ರಗತಿ ಮತ್ತು ಭಾವನೆಗಳ ನಡುವೆ ನಡೆಯುತ್ತಿದೆ. ಬಡವರ ಬದುಕಿನ ಪ್ರಣಾಳಿಕೆ ಕಾಂಗ್ರೆಸ್‌ನದ್ದಾದರೆ, ಬಿಜೆಪಿಯದ್ದು ಭಾವನೆಯ ಪ್ರಣಾಳಿಕೆಯಾಗಿದೆ. ರಾಜ್ಯ ಸರ್ಕಾರಕ್ಕೆ ಹಣ ಪಡೆದು ಅಕ್ಕಿ ನೀಡದ ಬಿಜೆಪಿಗರು ಇದೀಗ ಭಾರತ್ ರೈಸ್ ಮೂಲಕ ಅಕ್ಕಿ ವ್ಯಾಪಾರಿಗಳಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದ್ದು, ಕಾರ್ಯಕರ್ತರು ಮೈಮರೆಯದಂತೆ ಕೆಲಸ ಮಾಡಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪ್ರಾಮಾಣಿಕ ವ್ಯಕ್ತಿತ್ವದ ಕೆ.ಜಯಪ್ರಕಾಶ್ ಹೆಗ್ಡೆ ಹಿಂದೆ ಸಂಸದರಾಗಿದ್ದಾಗ ಜಿಲ್ಲೆಯ ರೈಲ್ವೆ ಯೋಜನೆ ಮಂಜೂರಾತಿಗೆ ಶ್ರಮಿಸಿದ್ದರಲ್ಲದೇ, ಅಡಕೆಗೆ ಬೆಂಬಲ ಬೆಲೆ ಸಿಗುವಂತೆ ಮಾಡಿದ್ದರು. ಈ ಭಾಗದಲ್ಲಿ ಅವರ ಪ್ರಭಾವ ಇಂದಿಗೂ ಕೂಡ ಸ್ಥಿರವಾಗಿದ್ದು, ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ. ಕಾರ್ಯಕರ್ತರು ಗ್ಯಾರಂಟಿ ಯೋಜನೆಯ ಪ್ರಯೋಜನೆ, ಬಿಜೆಪಿ ದುರಾಡಳಿತದ ಬಗ್ಗೆ ಮನೆ, ಮನೆಗೆ ತೆರಳಿ ತಿಳಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಕೆಪಿಸಿಸಿ ಸದಸ್ಯ ಕೆ.ವಿಶ್ವನಾಥ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಸಂತೋಷ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ನಗರ ಘಟಕ ಅಧ್ಯಕ್ಷ ಟಿ.ಎಸ್.ಪ್ರಕಾಶ್‌ವರ್ಮ, ಪ್ರಮುಖರಾದ ಕೆ.ರವಿಕಿಶೋರ್, ಗೊಲ್ಲರಹಳ್ಳಿ ರಂಗಪ್ಪ, ಶಮಿವುಲ್ಲಾ ಷರೀಫ್ ಮತ್ತಿತರರಿದ್ದರು.
ಸಿಎಂ ಸಿದ್ದರಾಮಯ್ಯ ಅವರನ್ನು ಕಟುವಾಗಿ ಟೀಕಿಸಿದ ಮಾಜಿ ಸಚಿವ ಸಿ.ಟಿ.ರವಿ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಂಸದರಾದ ಪ್ರತಾಪ್ ಸಿಂಹ ಹಾಗೂ ಅನಂತ್‌ಕುಮಾರ್ ಹೆಗ್ಡೆ ಸ್ಥಾನ ಕಳೆದುಕೊಂಡು ಮನೆ ಸೇರಿದ್ದಾರೆ. ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಜನ ರಾಜ್ಯವಷ್ಟೇ ಅಲ್ಲ, ಕ್ಷೇತ್ರದಲ್ಲೂ ಕಾಂಗ್ರೆಸ್ ಕೈಬಿಡಲಾರರು.ಜಿ.ಎಚ್.ಶ್ರೀನಿವಾಸ್, ತರೀಕೆರೆ ಶಾಸಕ