ವಿಜಯಪುರ : ನಮ್ಮ ದೇಶದ ಸಂತೋಷವು ನಮ್ಮ ಹೆಣ್ಣುಮಕ್ಕಳ ಘನತೆಯಲ್ಲಿ ಅಡಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಹೇಳಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 'ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ' ಕಾರ್ಯಕ್ರಮದಡಿ ಶುಕ್ರವಾರ ನಡೆದ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಬಲವರ್ಧನೆ ಮತ್ತು ಸಂವೇದನಾಶೀಲ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ ಎನ್ನುವ ಸಂದೇಶವು ಜನಮಾನಸಕ್ಕೆ ತಲುಪಲು ಹೆಚ್ಚಿನ ಪ್ರಮಾಣದಲ್ಲಿ ಜನಜಾಗೃತಿ ಕಾರ್ಯಕ್ರಮಗಳು ಆಗಬೇಕು. ಹೆಣ್ಣು ಮಕ್ಕಳ ರಕ್ಷಣೆ-ಸಂರಕ್ಷಣೆಯ ಬಗ್ಗೆ ನಮ್ಮ ದೇಶದಲ್ಲಿ ಬಹಳಷ್ಟು ಕಾನೂನುಗಳು ಜಾರಿಯಿದೆ. ಆದರೆ, ಕಾನೂನುಗಳ ಬಗ್ಗೆ ಬಹುತೇಕ ಮಹಿಳೆಯರಿಗೆ ತಿಳಿವಳಿಕೆ ಕಡಿಮೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಣ್ಣು ಮಗು ಮತ್ತು ಮಹಿಳೆಯರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೆಣ್ಣು ಮಕ್ಕಳ ರಕ್ಷಣೆಯೆಂದರೆ ಅದು ದೇಶದ ಸಂಪತ್ತಿನ ರಕ್ಷಣೆಯಾಗಿದೆ. ನಮ್ಮ್ಮಧ್ಯೆ ಹೆಣ್ಣು ಮತ್ತು ಗಂಡು ಎನ್ನುವ ಬೇಧ ಭಾವ ಇರಬಾರದು. ಮಗಳು ಭಾರವಲ್ಲ, ಅವಳು ಆಧಾರಳು. ಜೀವನ ಅವಳ ಹಕ್ಕು, ಶಿಕ್ಷಣ ಅವಳ ಆಯುಧವು ಎಂದು ತಿಳಿದು ಮಹಿಳೆಯರಿಗೆ ಶಿಕ್ಷಣ ಕೊಡಲು ಮುಂದಾಗಬೇಕು ಎಂದು ತಿಳಿಸಿದರು.
ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕಿಗೆ ಬೆಂಬಲ ಸೂಚಿಸಬೇಕು. ಲಿಂಗ ಪತ್ತೆ ಪರೀಕ್ಷೆ ಘಟನೆ ಕಂಡು ಬಂದಲ್ಲಿ ವರದಿ ಮಾಡಬೇಕು. ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟಬೇಕು. ಈ ವಿಚಾರಗಳಲ್ಲಿ ವಿವಿಧ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಯಾವುದೇ ಕಾನೂನುಗಳು, ನಿಯಮಗಳು ಜಾರಿಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು ಎಂಬುದನ್ನು ಮೊಟ್ಟಮೊದಲು ಅಧಿಕಾರಿಗಳು ಅರಿಯಬೇಕು. ಅಂದಾಗ ಮಾತ್ರ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಕಾಯ್ದೆ, ಕಾನೂನುಗಳ ಲಾಭವು ಮಹಿಳೆಯರಿಗೆ ಲಭಿಸಲು ಸಾಧ್ಯ ಎಂದು ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಹೆಣ್ಣು ಮಗಳು ಬೇರೆಯವರ ಸ್ವತ್ತು ಎನ್ನುವ ಅಮಾನವೀಯವಾದ ಮನಸ್ಥಿತಿ ಮೊದಲು ಬದಲಾಗಬೇಕು. ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಹಾಗೂ ಶಿಕ್ಷಣವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಮತ್ತು ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಸಮಾನತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ ಅತಿಮುಖ್ಯವಾಗಿದೆ. ಮಹಿಳೆಯರಿಗೂ ಸಮಾನ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ಹಾಣ, ಕರ್ನಾಟಕ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರ ಸಂಘದ ಗೌರವ ಕಾರ್ಯದರ್ಶಿ ಅಕ್ಷತಾ ಕೆ.ಸಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಲಕ್ಕಣ್ಣನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗೀತಾ ಎಸ್.ಗುತ್ತರಗಿಮಠ ಇನ್ನಿತರರು ಉಪಸ್ಥಿತರಿದ್ದರು.