ಜಿಲ್ಲೆ

ಲಕ್ಷ್ಮೇಶ್ವರದಲ್ಲೊಂದು ಕತ್ತಲೆ ನಗರ !

ಉತ್ತರ ಕನ್ನಡ ಡೆಸ್ಕ್

ಲಕ್ಷ್ಮೇಶ್ವರ: ಪುರಸಭೆ ವ್ಯಾಪ್ತಿಯ 1ನೇ ವಾರ್ಡ್​ನ ಕೌಡೇಶ್ವರಿ ನಗರದ ಬಡಾವಣೆಯನ್ನು ಕತ್ತಲೆಯ ನಗರ ಎನ್ನಬಹುದು. ಕಾರಣ ಈ ಬಡಾವಣೆ ನಿರ್ವಣವಾಗಿ 10 ವರ್ಷ ಕಳೆಯುತ್ತ ಬಂದರೂ ಈವರೆಗೂ ಇಲ್ಲಿನ ನಿವಾಸಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ.

ಆಗಿರುವುದೇನು: 2016ರಲ್ಲಿ ಖಾಸಗಿ ಜಮೀನಿನಲ್ಲಿ ಎನ್​ಎ ಮಾಡಿದ್ದ ನಿವೇಶನಗಳನ್ನು ಅಂದಾಜು 60 ಕುಟುಂಬಗಳು ಖರೀದಿಸಿದ್ದವು. ಪುರಸಭೆಯಿಂದ ನಿವೇಶನದ ಉತಾರಗಳನ್ನು ಪಡೆದುಕೊಂಡಿದ್ದಾರೆ. ಆದರೆ, ನಿವೇಶನಗಳಿಗೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಿಲ್ಲ. ವಿದ್ಯುತ್ ಪೂರೈಕೆಗೆ ಅವಶ್ಯವಿರುವ ವಿದ್ಯುತ್ ಕಂಬಗಳು ಇತ್ಯಾದಿಗಳನ್ನು ಪುರಸಭೆ ಅವರು ಒದಗಿಸಿದರೆ ವಿದ್ಯುತ್ ಪೂರೈಸುವುದಾಗಿ ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಅದರಂತೆ ಪುರಸಭೆ ಟೆಂಡರ್ ಮೂಲಕ ವಿದ್ಯುತ್ ಕಂಬಗಳನ್ನು ಬಡಾವಣೆಯಲ್ಲಿ ಅಳವಡಿಸಿ ತಿಂಗಳಾದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಬಡಾವಣೆಯಲ್ಲಿರುವ ಒಟ್ಟು 60 ಮನೆಗಳಲ್ಲಿ 40 ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಉಳಿದ 20 ಮನೆಗಳಿಗೆ ವಿದ್ಯುತ್ ಸೌಕರ್ಯವಿದೆ.

ಇಲ್ಲಿನ ನಿವಾಸಿಗಳಿಗೆ ರಾತ್ರಿ ಏಕಾಗುತ್ತದೆ ಎನ್ನುವಂಥ ಭಾವನೆ ಮೂಡಿದೆ. ಇದೀಗ ಮಕ್ಕಳ ಪರೀಕ್ಷೆ ಸಮಯ ವಿದ್ಯಾಭ್ಯಾಸಕ್ಕೂ ತೊಂದರೆ, ಮನೆಯಲ್ಲಿ ಟಾರ್ಚ್ ಫೋನ್​ನ ಬೆಳಕಿನಲ್ಲಿ ಅಡುಗೆ, ಊಟ ಮಾಡುವುದು, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವಂತಾಗಿದೆ. ಬಡಾವಣೆಯಲ್ಲಿ ಕೆಲವರು ತಮ್ಮ ಮನೆಗಳನ್ನು ಬಿಟ್ಟು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವೃದ್ಧರು, ಮಕ್ಕಳು ರಾತ್ರಿ ವೇಳೆ ಸಾಕಷ್ಟು ತೊಂದರೆ ಪಡುತ್ತಿದ್ದಾರೆ.

ಸಂಕರ್ಪ ಕಲ್ಪಿಸಲು ಆಗ್ರಹ: ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ ಕುಂದು-ಕೊರತೆ ಸಭೆ ಮಾಡಿದಾಗ ಅಲ್ಲಿಯೂ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ರೀತಿ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕೌಡೇಶ್ವರ ನಗರಕ್ಕೆ ವಿದ್ಯುತ್ ಪೂರೈಸಲು ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳಾದ ನಾಗಪ್ಪ ಗೊರವರ, ಶಿವಾನಂದ ಗೊಜಗೂಜಿ ಯಲ್ಲವ್ವ ಉಳ್ಳಟ್ಟಿ, ರೇಣವ್ವ ಗೊರವರ, ಪುಪ್ಪಾ ಹಡಪದ, ವಿದ್ಯಾರ್ಥಿಗಳಾದ ಲಕ್ಷ್ಮೀ ಗೊರವರ, ಮೇಘಾ ಹಡಪದ ಒತ್ತಾಯಿಸಿದ್ದಾರೆ.

ಕೌಡೇಶ್ವರ ನಗರಕ್ಕೆ ವಿದ್ಯುತ್ ಪೂರೈಸುವಂತೆ ಪುರಸಭೆಯಿಂದ ಇಲ್ಲಿಯವರೆಗೆ ಯಾವುದೇ ಅರ್ಜಿ ನಮ್ಮ ಇಲಾಖೆಗೆ ಬಂದಿಲ್ಲ. ಅವರಿಂದ ಅರ್ಜಿ ಬಂದ ತಕ್ಷಣ ನಿಯಮಾನುಸಾರ ವಿದ್ಯುತ್ ಪೂರೈಸಲಾಗುವುದು. | ಆಂಜನೇಯಪ್ಪ ಬಿ., ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೌಡೇಶ್ವರಿ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಮತ್ತು ತುರ್ತು ಬೆಳಕಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪುರಸಭೆ ಅನುದಾನದಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸಲಾಗಿದೆ. ಪುರಸಭೆ ಇಂಜಿನಿಯರ್ ಎರಡು ಕಡೆ ಕಾರ್ಯನಿರ್ವಹಿಸುವುದರಿಂದ ಮತ್ತು ಮುಖ್ಯಾಧಿಕಾರಿ ಕೆಲಸದ ನಿಮಿತ್ತ ಪುರಸಭೆಗೆ ಬಂದಿಲ್ಲದ ಕಾರಣ ವಿಳಂಬವಾಗಿದೆ. ಹೆಸ್ಕಾಂಗೆ ಕಾಮಗಾರಿ ಹಸ್ತಾಂತರಿಸಿ ಸಂಪರ್ಕ ಕಲ್ಪಿಸುವಂತೆ ಪತ್ರ ಬರೆದು 2 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. | ಯಲ್ಲಮ್ಮ ದುರಗಣ್ಣವರ, ಪುರಸಭೆ ಅಧ್ಯಕ್ಷೆ