ಜಿಲ್ಲೆ

ಅಪಾಯ ಆಹ್ವಾನಿಸುವ ಹೆದ್ದಾರಿ ಸಂಪರ್ಕ ರಸ್ತೆ!

ಎನ್.ವೆಂಕಟೇಶ್

ಉದ್ದೇಶಿತ ಬಾಗೇಪಲ್ಲಿ ಎಪಿಎಂಸಿಯಿಂದ ನಿರ್ಮಾಣ ಅನುಮತಿ ಇಲ್ಲದೆ, ಅವೈಜ್ಞಾನಿಕ ಕ್ರಮದಿಂದ ಅಪಘಾತ ಭೀತಿ

ಬಾಗೇಪಲ್ಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆಯದೆ ಅವೈಜ್ಞಾನಿಕವಾಗಿ ರಸ್ತೆ ಸಂಪರ್ಕ ಕಲ್ಪಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡೆಯಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯದ ಭೀತಿ ಎದುರಾಗಿದೆ.

ತಾಲೂಕಿನ ಪರಗೋಡು ಚಿತ್ರಾವತಿ ಡ್ಯಾಂ ಬಳಿ ನಿರ್ಮಿಸುತ್ತಿರುವ ಉದ್ದೇಶಿತ ಕೃಷಿ ಉತ್ಪನ್ನ ಮಾರುಕಟ್ಟೆಯ ಸಂಪರ್ಕ ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಜತೆಗೆ, ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆಯದೆ ಆಗಮನ ಮತ್ತು ನಿರ್ಗಮನದ ರಸ್ತೆಗಳನ್ನು ನೇರವಾಗಿ ಹೆದ್ದಾರಿಗೆ ಸಂಪರ್ಕ ಕಲ್ಪಿಸಿ ನಿಯಮ ಉಲ್ಲಂಘಿಸಲಾಗಿದೆ.

ಅಪಘಾತ ವಲಯ

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೆಂಡೂರು ಕ್ರಾಸ್‌ನಿಂದ ಪರಗೋಡು ಗ್ರಾಮದವರೆಗಿನ ಹೆದ್ದಾರಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತಹ ಅಪಘಾತ ವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಉದ್ದೇಶಿತ ಕೃಷಿ ಉತ್ಪನ್ನ ಮಾರುಕಟ್ಟೆ ರಸ್ತೆಗಳ ನಿರ್ಮಾಣದಲ್ಲೂ ಹೆದ್ದಾರಿ ಪ್ರಾಧಿಕಾರದ ನಿಯಮ ಪಾಲಿಸದೆ, ಅವೈಜ್ಞಾನಿಕವಾಗಿ ಸಂಪರ್ಕ ರಸ್ತೆಗಳನ್ನು ಹೆದ್ದಾರಿಗೆ ಕಲ್ಪಿಸಲಾಗಿದೆ.

ಅನುಮತಿ ಇಲ್ಲ

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಾರ್ವಜನಿಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಂದು ಕಾನೂನು, ಸರ್ಕಾರಿ ಸಂಸ್ಥೆಗಳಿಗೆ ಒಂದು ಕಾನೂನು ಎಂಬಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರ್ತನೆ ತೋರುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವೈಜ್ಞಾನಿಕ ರಸ್ತೆ ಸಂಪರ್ಕದಿಂದ ಅಪಘಾತ ಖಚಿತ ಎಂಬಂತಾಗಿದೆ. ಹೆದ್ದಾರಿಯ ಅಕ್ಕಪಕ್ಕದಲ್ಲಿ ಸರ್ವೀಸ್ ರಸ್ತೆ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮತ್ತೊಂದು ರಸ್ತೆಯಿಂದ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸಬಾರದು ಎಂಬುದು ನಿಯಮ. ಅಲ್ಲದೇ, ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಇಲ್ಲಿ ಎಲ್ಲ ನಿಯಮ ಗಾಳಿಗೆ ತೂರಲಾಗಿದೆ.

"ಪರಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಪ್ರಾಧಿಕಾರದಿಂದ ಅನುಮತಿ ನೀಡಿಲ್ಲ. ಅನಧಿಕೃತವಾಗಿ ರಸ್ತೆ ಸಂಪರ್ಕ ಕಲ್ಪಿಸಿದ್ದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು." - ಜಯಕುಮಾರ್, ಯೋಜನಾ ನಿರ್ದೇಶಕ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರ, ಬೆಂಗಳೂರು "ಪರಗೋಡು ಬಳಿ ನಿರ್ಮಿಸಲಾಗುತ್ತಿರುವ ಉದ್ದೇಶಿತ ಕೃಷಿ ಉತ್ಪನ್ನ ಮಾರುಕಟ್ಟೆ ಲೇಔಟ್ ಪ್ಲ್ಯಾನ್ ಸಿದ್ಧಪಡಿಸಿರುವ ಇಲಾಖೆ ತಾಂತ್ರಿಕ ವಿಭಾಗದವರು ಎಲ್ಲ ಅನುಮತಿ ಪಡೆದುಕೊಳ್ಳಬೇಕಾಗಿದೆ. ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳುವ ಬಗ್ಗೆ ಮಾಹಿತಿ ಇಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಎಲ್ಲ ಅನುಮತಿ ಪಡೆದುಕೊಂಡು ಲೋಕಾರ್ಪಣೆ ಮಾಡಲಾಗುವುದು ಎಂದು ಇಂಜಿನಿಯರ್ ಸತೀಶ್ ತಿಳಿಸಿದ್ದಾರೆ." - ಮುಬೀನ್‌ತಾಜ್, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಾಗೇಪಲ್ಲಿ