ಮಂಗಳೂರು: ದಕ್ಷಿಣ ಕನ್ನಡ ಎಸ್ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ಎಎಸ್ಐ ತಿಪ್ಪಣ್ಣ ನಾಗವ್ವ ಮಾದರ(37) ದಾರಿಯಲ್ಲೇ ಕುಸಿದು ಬಿದ್ದು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ತಿಪ್ಪಣ್ಣ ನಾಗವ್ವ ಮಾದರ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ಚಿಪ್ಪಾಲ್ಕಟ್ಟಿ ಗ್ರಾಮದವರು.
ಶುಕ್ರವಾರ ಸಂಜೆ 4 ಗಂಟೆಗೆ ನಗರದ ಪಾಂಡೇಶ್ವರದ ಎಸ್ಪಿ ಕಚೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಹೋಗುತ್ತಿರುವಾಗ ಎ.ಬಿ.ಶೆಟ್ಟಿ ವೃತ್ತದ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಸಿಎಆರ್ ಸಿಬ್ಬಂದಿ ಎಎಚ್ಸಿ ರಮೇಶ್ ಅವರು ಉಪಚರಿಸಿ ಪಕ್ಕದ ಎಂ.ವಿ. ಶೆಟ್ಟಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅಲ್ಲಿಂದ ಆಂಬುಲೆನ್ಸ್ ಮೂಲಕ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
2011ರಲ್ಲಿ ಪೊಲೀಸ್ ಕಾನ್ಸ್ಟೆಬಲ್(ಎಫ್ಪಿಬಿ) ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಾಗಲಕೋಟೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯದಲ್ಲಿದ್ದವರು. ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳಿಂದ ಎಎಸ್ಐ ಕರ್ತವ್ಯ ನಿರ್ವಹಿಸುತ್ತಿದ್ದರು.
ಪತ್ನಿ ದೀಪಾ ತಿಪ್ಪಣ್ಣ ಮಾದರ ಮತ್ತು ಮೂರು ಪುಟ್ಟ ಮಕ್ಕಳಾದ ನಿಹಾರಿಕಾ(6), ಅನ್ವಿತಾ(3.6 ವರ್ಷ) ಹಾಗೂ ನಿಶಾಂತ್(1.6 ವರ್ಷ) ಅವರನ್ನು ತಿಪ್ಪಣ್ಣ ನಾಗವ್ವ ಮಾದರ ಅಗಲಿದ್ದಾರೆ.