ಜಿಲ್ಲೆ

ಮೊಬೈಲ್ ರೀಚಾರ್ಜ್ ಹಣ ವಾಪಸ್ ಕೊಡುವ ಸೋಗಿನಲ್ಲಿ ಪೊಲೀಸ್ ಪೇದೆಗೂ ವಂಚಿಸಿದ ಸೈಬರ್ ಕಳ್ಳ!

ಬೆಂಗಳೂರು: ವಂಚನೆ ಎಸಗಲು ಸೈಬರ್ ಕಳ್ಳ ಬಲೆಬೀಸಿದ್ದಾನೆ ಎಂಬುದು ಗೊತ್ತಾಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿ ಮಾಡಿ ಎಚ್ಚರ ವಹಿಸಿದರೂ ಹೆಡ್ ಕಾನ್​ಸ್ಟೆಬಲ್ 4,800 ರೂ. ಕಳೆದುಕೊಂಡಿದ್ದಾರೆ.

ಮೈಸೂರು ರಸ್ತೆ ಸಿರ್ಸಿ ವೃತ್ತದ ಸಿಎಆರ್ ಮುಖ್ಯಪೇದೆ ವಿಜಯ್ ಮಂಜುನಾಥ್ ವಂಚನೆಗೆ ಒಳಗಾದವರು. ಕೆಲ ದಿನಗಳ ಹಿಂದೆ ವಿಜಯ್ ಮೊಬೈಲ್ ನಂಬರ್​ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಏರ್​ಟೆಲ್ ಕಸ್ಟಮರ್ ಕೇರ್​ನಿಂದ ಎಂದು ಪರಿಚಯ ಮಾಡಿಕೊಂಡಿದ್ದಾನೆ. ‘ನೀವು ರಿಚಾರ್ಜ್ ಮಾಡಿರುವ ಹಣವನ್ನು ನಿಮ್ಮ ಖಾತೆಗೆ ವಾಪಸ್ ಜಮೆ ಮಾಡುತ್ತೇನೆ. ಅದಕ್ಕಾಗಿ ನಿಮ್ಮ ಮೊಬೈಲ್​ಗೆ ಲಿಂಕ್ ಕಳುಹಿಸುತ್ತೇನೆ. ಅದರಲ್ಲಿ ಬ್ಯಾಂಕ್ ಖಾತೆ ವಿವರ, ನಿಮಗೆ ಬರಬೇಕಾದ ಮೊತ್ತ ಹಾಗೂ ಕೊನೆಯಲ್ಲಿ ನಿಮ್ಮ ಪಿನ್ ಹಾಕಿ’ ಎಂದು ಹೇಳಿದ್ದಾನೆ.

ಅನುಮಾನಗೊಂಡ ವಿಜಯ್, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಇನ್ನೊಂದು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ನಂತರ ಅಪರಿಚಿತ ವ್ಯಕ್ತಿ ಹೇಳಿದಂತೆ ಲಿಂಕ್​ನಲ್ಲಿ ವಿವರ ನಮೂದಿಸಿದ್ದಾರೆ. ಆ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದ ವಿಚಾರ ಸೈಬರ್ ಕಳ್ಳ, ಮತ್ತೆ ವಿಜಯ್ ಮೊಬೈಲ್​ಗೆ ಕರೆ ಮಾಡಿ ‘ಬೇರೊಂದು ಬ್ಯಾಂಕ್ ವಿವರ ಕೊಡಿ. ಇದಕ್ಕೆ ಹಣ ವಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಕೇಳಿದ್ದಾನೆ. ಅದಕ್ಕೆ ಮುಖ್ಯಪೇದೆ ನಿರಾಕರಿಸಿದ್ದಾರೆ.

ಸ್ವಲ್ಪ ಸಮಯದ ನಂತರ ವಿಜಯ್, ತಮ್ಮ ಬ್ಯಾಂಕ್ ಖಾತೆಗೆ 4 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಅದೇ ಸಮಯಕ್ಕೆ ಕಾಯುತ್ತಿದ್ದ ಸೈಬರ್ ಕಳ್ಳ, ತಕ್ಷಣ ಆ ಖಾತೆಯಿಂದ 4,800 ರೂ.ಗಳನ್ನು ಲಪಟಾಯಿಸಿದ್ದಾನೆ. ಈ ಬಗ್ಗೆ ವಿಜಯ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಬಾಟಮ್ ಪಿಶಿಂಗ್

ಬ್ಯಾಂಕ್ ಖಾತೆ ಮೇಲೆ ನಿಗಾವಹಿಸಿ ಮೊತ್ತ ವನ್ನು ಪರಿಶೀಲನೆ ನಡೆಸಿ ಹಣ ವರ್ಗಾವಣೆ ಮಾಡಿ ಕೊಳ್ಳುವುದಕ್ಕೆ ಸೈಬರ್ ಕ್ರೖೆಂನಲ್ಲಿ ಬಾಟಮ್ ಪಿಶಿಂಗ್ ಎನ್ನಲಾಗುತ್ತದೆ. ಸೈಬರ್ ಕಳ್ಳರು ಮೊದಲು ಗ್ರಾಹಕರಿಂದ ಬ್ಯಾಂಕ್ ಖಾತೆ ವಿವರ ಪಡೆದು ಅದರ ಮೇಲೆ ನಿಗಾ ವಹಿಸುತ್ತಾರೆ. ಸಣ್ಣ ಪ್ರಮಾಣದ ಮೊತ್ತ ಇದ್ದರೆ ಸುಮ್ಮನಾಗಿ ಆ ನಂತರ ಖಾತೆಗೆ ಹೆಚ್ಚಿನ ಹಣ ಜಮೆಯಾದ ಕೂಡಲೇ ಕನ್ನ ಹಾಕುತ್ತಾರೆ.