ಮೂಡಿಗೆರೆ: ಮಗುವಿಗೆ ಸಂಸ್ಕಾರಯುತ ಶಿಕ್ಷಣವೇ ನಿಜವಾದ ಸಂಪತ್ತು ಎಂಬುದನ್ನು ಪಾಲಕರು ಅರ್ಥ ಮಾಡಿಕೊಂಡು ಮಕ್ಕಳಿಗೆ ಅದೇ ಮಾದರಿಯ ಸುಸಂಸ್ಕೃತ ಶಿಕ್ಷಣ ಕೊಡಿಸಬೇಕು ಎಂದು ಅರಕಲಗೂಡು ತಾಲೂಕಿನ ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮಿಜಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದಿಂದ ಆಯೋಜಿಸಿದ್ದ ಸಾಮೂಹಿಕ ಉಪನಯನ ಹಾಗೂ ವಿಶ್ವಕರ್ಮ ಮಹಾಯಜ್ಞದಲ್ಲಿ ಆಶೀರ್ವಾಚನ ನೀಡಿ, ಪ್ರತಿಯೊಬ್ಬ ಪಾಲಕರಿಗೂ ತಮ್ಮ ಮಕ್ಕಳು ಸುಸಂಸ್ಕೃತರಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡದಿದ್ದರೆ ಬೇವನ್ನು ಭಿತ್ತನೆ ಮಾಡಿ ಮಾವಿನ ಫಲವನ್ನು ನಿರೀಕ್ಷಿಸದಂತಾಗುತ್ತದೆ ಎಂದರು.
ಚನ್ನಗಿರಿಯ ವಡ್ನಾಳ್ ಮಹಾಸಂಸ್ಥಾನ ಮಠದ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಆಂತರ್ಯದಲ್ಲಿ ಯಾವುದೇ ವ್ಯತ್ಯಾಸವಿದ್ದರೂ ಬಾಹ್ಯವಾಗಿ ಎಲ್ಲರೂ ಒಂದಾಗಿ ನಿಲ್ಲಬೇಕಿದೆ. ವಿಶ್ವಕರ್ಮ ಸಮುದಾಯವು ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಹೊಂದಿದೆ. ಸಂಘಟನೆ ಮೂಲಕ ಸಮುದಾಯವು ಬಲಿಷ್ಟವಾಗಬೇಕು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಸಮುದಾಯದ ಆಶಾ ಕಾರ್ಯಕರ್ತೆಯರನ್ನು ನ್ಮಾನಿಸಲಾಯಿತು. 65 ವಟುಗಳಿಗೆ ಉಪನಯನ ಹಾಗೂ ಧರ್ಮೋಪದೇಶ ನೀಡಲಾಯಿತು. ಸಂಘದ ಅಧ್ಯಕ್ಷ ಮಂಜುನಾಥ ಆಚಾರ್ಯ, ಸುಬ್ರಹ್ಮಣ್ಯ ಅಂಗಡಿ, ಮಂಜುನಾಥ್, ಕುಮಾರಚಾರ್, ರಮೇಶ್, ಶಂಕರಾಚಾರ್ ಬೆಳಗಾವಿ, ಚಂದ್ರಚಾರ್, ಸತೀಶ್, ವಾಸುದೇವ್, ಪರಮೇಶಾಚಾರ್, ಶಿವಶಂಕರ್, ಸಂಧ್ಯಾ, ನಾರಾಯಣಚಾರ್, ಉಮಾಶಂಕರ್, ಗಣಪತಿ ಆಚಾರ್, ಮಂಜುನಾಥಾಚಾರ್, ಚಂದ್ರಾವತಿ, ಸಂಧ್ಯಾ, ಆಶಾ, ಪುಪ್ಪಾ ಇತರರಿದ್ದರು.