ಚಿಕ್ಕಬಳ್ಳಾಪುರ : ಕಾಂಗ್ರೆಸ್ ಭದ್ರಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಸೋಲು ಕೈ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪದಾಧಿಕಾರಿಗಳ ಪರಿಶ್ರಮದ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಭಾವಿ ರಾಜಕಾರಣಿ ಡಾ ಕೆ.ಸುಧಾಕರ್ ವಿರುದ್ಧ ಬಲಿಜ ಸಮುದಾಯದ ಪ್ರದೀಪ್ ಈಶ್ವರ್ ಅಯ್ಯರ್ ಸಾಧಿಸಿದ ಗೆಲುವು ಕಾಂಗ್ರೆಸ್‌ನಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಇದರ ನಡುವೆ ಯುವ ವರ್ಚಸ್ಸು, ಒಳ್ಳೆಯ ಕೌಟುಂಬಿಕ ಹಿನ್ನೆಲೆ ಮತ್ತು ಆರ್ಥಿಕ ಪ್ರಾಬಲ್ಯ ಹೊಂದಿದ್ದ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ವಿಶ್ವಾಸದ ಗೆಲುವಿನ ಹೊಸ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ನಿರೀಕ್ಷೆಗಳು ಹುಸಿಯಾಗಿವೆ.
ಭಾರಿ ಅಂತರದಲ್ಲಿ ಸೋಲು
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಮತಗಳ ಅಂತರದಲ್ಲಿ ಕಾಂಗ್ರೆಸ್ ಸೋತಿರುವುದನ್ನು ಅರಗಿಸಿಕೊಳ್ಳಲು ಪಕ್ಷದಲ್ಲಿನ ನಿಷ್ಠಾವಂತರಿಗೆ ಸಾಧ್ಯವಾಗುತ್ತಿಲ್ಲ. ಎನ್‌ಡಿಎ ಅಭ್ಯರ್ಥಿಗೆ ಪೈಪೋಟಿಯಾಗಿ ಚುನಾವಣಾ ಪ್ರಚಾರ, ಸಂಘಟನೆಯಲ್ಲಿ ಕೈ ಪಾಳಯ ಗಮನ ಸೆಳೆದಿತ್ತು. ಇದರ ಜತೆಗೆ ಗ್ಯಾರಂಟಿ ಯೋಜನೆಗಳು, ಕ್ಷೇತ್ರದಲ್ಲಿನ ಸ್ವಪಕ್ಷೀಯ ಶಾಸಕರ ಬೆಂಬಲದಿಂದ ಗೆಲುವಿನ ಖಾತ್ರಿಯ ಬಗ್ಗೆ ಹೇಳಲಾಗುತ್ತಿತ್ತು. ಆದರೆ, ಚುನಾವಣೆಯಲ್ಲಿ ಒನ್‌ಸೈಡ್ ಹೋರಾಟ ಕಂಡು ಬಂದಿದ್ದು, ಹೆಚ್ಚಿನ ಮತಗಳೊಂದಿಗೆ ಎದುರಾಳಿಗೆ ಗೆಲುವು ಸಿಕ್ಕಿದೆ. ಇನ್ನು ನಿರೀಕ್ಷೆಯ ಕ್ಷೇತ್ರದಲ್ಲಿ ಲೀಡ್ ಸಿಕ್ಕಿಲ್ಲ, ಪ್ರಾಬಲ್ಯ ಹೊಂದಿರದ ಕಡೆಯೂ ಬಿಜೆಪಿ ಉತ್ತಮ ಸಾಧನೆ ತೋರಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಸ್ವಪಕ್ಷೀಯ ಶಾಸಕರ ವಿರುದ್ಧ ಆಕ್ರೋಶ
ಸ್ವಪಕ್ಷೀಯ ಶಾಸಕರ ವಿರುದ್ಧ ಕಾಂಗ್ರೆಸ್‌ನ ಕೆಲ ನಾಯಕರು, ಪದಾಧಿಕಾರಿಗಳು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ವಿರುದ್ಧ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಪುತ್ರ, ರಾಜ್ಯ ಯುವ ಕಾಂಗ್ರೆಸ್‌ನ ಜಂಟಿ ಕಾರ್ಯದರ್ಶಿ ಜಗದೀಶ್ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಸಂದೇಶ ಹಾಕಿದ್ದಾರೆ.
‘ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಾರಾಮಯ್ಯ ಅಣ್ಣನವರು ದೇವರಂತಹ ಮನುಷ್ಯ, ಅವರು ಸೋತಿರೋದಕ್ಕೆ ಜಾಸ್ತಿ ನೋವಾಗಿದೆ. ಆದರೆ, ಇದಕ್ಕೆ ಕಾರಣ ನಮ್ಮ ಎಂಎಲ್‌ಎ ಪ್ರದೀಪ್ ಈಶ್ವರ್. ಅವರ ಮಾತುಗಳಿಂದಲೇ ಸೋತೆವು. ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹೇಳ್ತಾ ಇದ್ದೀನಿ, ನಿಮ್ಮಿಂದಲೇ ಎಂಟು ಕ್ಷೇತ್ರದಲ್ಲಿ ನಮ್ಮ ಒಕ್ಕಲಿಗರು ಒಂದಾಗುವುದಕ್ಕೆ ಕಾರಣವಾಯಿತು. ಇಲ್ಲಿ ನಮ್ಮ ಕಾರ್ಯಕರ್ತರು ಲಕ್ಷಾಂತರ ರೂ. ಪಕ್ಷಕ್ಕೆ ಖರ್ಚು ಮಾಡಿ ಪಕ ಕಟ್ಟಿದ್ದೆವು, ನೀವು, ಬಂದು ಪಕ್ಷವನ್ನು ಹಾಳು ಮಾಡುವುದಕ್ಕೆ ಇದ್ದೀರಿ, ದಯವಿಟ್ಟು ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಇಲ್ಲ ಎಂದರೆ ಮಾತು ಕಡಿಮೆ ಮಾಡಿ, ಕ್ಷೇತ್ರದ ಕಡೆ ಗಮನ ಕೊಡು ಅಣ್ಣ’ ಎಂದು ಸಂದೇಶದಲ್ಲಿ ಮನವಿ ಮಾಡಿಕೊಂಡಿದ್ದಾರೆ.