ಹಾಸನ: ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನದ ಐದನೇ ದಿನ ಮಂಗಳವಾರ ಭಕ್ತರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಅಪಾರ ಸಂಖ್ಯೆಯಲ್ಲಿ ಭಕ್ತರು, ಗಣ್ಯರು ತಂಡೋಪ ತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆದರು. 24 ಗಂಟೆಗಳಲ್ಲಿ 2.29 ಲಕ್ಷ ಜನರು ದರ್ಶನ ಪಡೆದಿದ್ದಾರೆ.
ಧರ್ಮ ದರ್ಶನದ ಸಾಲುಗಳು ತುಂಬಿ ತುಳುಕುತ್ತಿದ್ದರೆ, 1000 ಹಾಗೂ 300 ರೂ.ವಿಶೇಷ ದರ್ಶನದ ಸಾಲುಗಳಲ್ಲೂ ಭಕ್ತರ ಸಾಲು ಉದ್ದವಾಗಿ ಕಂಡು ಬಂದಿತು. ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಸಾರ್ವಜನಿಕ ದರ್ಶನ ಇತ್ತು. ನೈವೇದ್ಯ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಿತ್ತು.
ಮಧ್ಯಾಹ್ನ 3.30ಕ್ಕೆ ಎಂದಿನಂತೆ ದರ್ಶನ ಪ್ರಾಂರಂಭವಾಯಿತು. ಬುಧವಾರ ಬೆಳಗಿನ ಜಾವ 3 ಗಂಟೆಯವರೆಗೂ ನಿರಂತರ ದರ್ಶನ ಸಾಗಲಿದೆ. ಅಪಾರ ಸಂಖ್ಯೆಯ ಭಕ್ತರ ಜತೆಗೆೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಿಷ್ಟಾಚಾರದಂತೆ ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಯತ್ನಾಳ್ ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈಕಾರ ಕೂಗಿದರು. ಹಿಂದು ಹುಲಿ ಯತ್ನಾಳ್‌ಗೆ ಜೈ ಎಂದು ಘೋಷಣೆ ಕೇಳಿ ಬಂದವು. ಇದಕ್ಕೆ ಕೈ ಮುಗಿದು ಒಳ ಹೋದ ಯತ್ನಾಳ್ ದೇವಿ ದರ್ಶನ ಪಡೆದರು.
ಮಾಜಿ ಸಚಿವ ಕೆ.ಗೋಪಾಲಯ್ಯ ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಂಡಗದ್ದೆಯ ಅವಧೂತ ಆಶ್ರಮದ ವಿನಯ್ ಗುರೂಜಿ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಸಹ ಜಿಲ್ಲಾಡಳಿತದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿ ದೇವಿ ದರ್ಶನ ಪಡೆದರು.
ಶಾಸಕ ಎಸ್.ಸುರೇಶ್, ಎಚ್.ಕೆ.ಸುರೇಶ್, ಬಸವಗೌಡ ದದ್ದಲ್, ಚಲನಚಿತ್ರ ನಟ ಪ್ರಥಮ್, ತರಂಗ ವಿಶ್ವ, ಒಂದು ವರ್ಷದ ಪುಟ್ಟು ಮಗುವಿನೊಂದಿಗೆ ಆಗಮಿಸಿದ್ದ ವಸಿಷ್ಠಸಿಂಹ-ಹರಿಪ್ರಿಯಾ ದಂಪತಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆದರು.