ಜಿಲ್ಲೆ

ಹಾಸನಾಂಬೆ ದರ್ಶನಕ್ಕೆ ಗಣ್ಯರ ದಂಡು

ಹಾಸನ: ಹಾಸನಾಂಬ ನಾಲ್ಕನೇ ದಿನದ ದರ್ಶನಕ್ಕೆ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಶಾಸಕ ಸ್ವರೂಪ್‌ಪ್ರಕಾಶ್, ನಟಿ ತಾರಾ ಇತರರು ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ದೇವಿ ದರ್ಶನಕ್ಕಾಗಿ ನಟಿಯರಾದ ತಾರಾ, ಅಂಜಲಿ ಮತ್ತು ತ್ರಿವೇಣಿ ಅವರು ಗಣ್ಯರ ಶಿಷ್ಟಾಚಾರದ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿದರು.

ಸಿನಿಮಾ ತಾರೆಯರು ದೇವಾಲಯಕ್ಕೆ ಬಂದಿದ್ದ ಸಂದರ್ಭ ಶಾಸಕ ಎಚ್.ಡಿ. ರೇವಣ್ಣ ಅವರು ದೇವಾಲಯದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ಹಿನ್ನೆಲೆ ನಟಿ ತಾರಾ ಅವರು ದೇವಾಲಯದ ಹೊರಗೆ ಕೆಲಕಾಲ ಕುಳಿತುಕೊಳ್ಳುವಂತಾಯಿತು. ಈ ಸಮಯದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮತ್ತು ಅವರ ಪತ್ನಿ ಕೂಡ ದೇವಿ ದರ್ಶನಕ್ಕಾಗಿ ಆಗಮಿಸಿ ದೇವಿ ದರ್ಶನಕ್ಕೆ ಕಾದಿದ್ದರು. ನಂತರ ಅಧಿಕಾರಿಗಳು ಶಾಸಕರನ್ನು ವಾರ್ ರೂಮ್‌ಗೆ ಕರೆದುಕೊಂಡು ಹೋಗಿ ದೇವಾಲಯದ ಒಳಗಿನ ವ್ಯವಸ್ಥೆ ಹಾಗೂ ಪೂಜಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.

ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ

ಹಾಸನ: ಶಿಷ್ಟಾಚಾರ ಪಾಲನೆ ಮಾಡದೆ, ಯಾವುದೇ ಅಧಿಕಾರಿಗಳ ಗಮನಕ್ಕೂ ತಾರದೆ ಶಾಸಕ ಎಚ್.ಡಿ.ರೇವಣ್ಣ ದಂಪತಿ ತಮ್ಮ ಕಾರಿನಲ್ಲಿ ನೇರವಾಗಿ ಬಂದು ಸ್ವಲ್ಪ ದೂರು ನಡೆದು ಕೊಂಡೇ ದೇವಾಲಯಕ್ಕೆ ಆಗಮಿಸಿದರು.

ಈ ವೇಳೆ ಅವರ ಕಾರನ್ನು ತಡೆದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ ಆದರು. ಪತ್ನಿ ಭವಾನಿ ಜತೆ 1 ಸಾವಿರ ರೂ. 5 ಟಿಕೆಟ್ ಪಡೆದು ನೇರ ದರ್ಶನ ಪಡೆದರು.

ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ಗರ್ಭಗುಡಿಯೊಳಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ತಂದೆ ದೇವೇಗೌಡ, ತಾಯಿ ಚೆನ್ನಮ್ಮ, ಸಹೋದರ ಕುಮಾರಸ್ವಾಮಿ, ನಾದಿನಿ ಅನಿತಾ ಕುಮಾರಸ್ವಾಮಿ, ಪುತ್ರರಾದ ನಿಖಿಲ್ ಕುಮಾರಸ್ವಾಮಿ, ಡಾ.ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಿದ ಡಿಸಿ

ಹಾಸನ: ಜಿಲ್ಲಾಧಿಕಾರಿ ಲತಾಕುಮಾರಿ ಧರ್ಮದರ್ಶನದ ಸರತಿ ಸಾಲಿನಲ್ಲಿ ಸಾಗಿ ಹಾಸನಾಂಬ ದೇವಿ ದರ್ಶನ ಪಡೆದರು. ದೇವಿ ದರ್ಶನದ ಸಂದರ್ಭದಲ್ಲಿ ತಾವು ಜಿಲ್ಲಾಧಿಕಾರಿ ಎನ್ನುವುದನ್ನು ತಿಳಿಯದೆ ನಿಂತಿದ್ದ ಭದ್ರತಾ ಸಿಬ್ಬಂದಿ ಅವರನ್ನು ಮುಂದೆ ಮುಂದೆ ಹೋಗುವಂತೆ ತಳ್ಳುತ್ತಿದ್ದರೂ ಅವರು ನಗುತ್ತಲೇ ಸಾಗಿದರು. ಸರತಿ ಸಾಲಿನಲ್ಲಿ 2-3 ಗಂಟೆಗಳ ನಿಂತರೂ ದೇವಿ ದರ್ಶನ ಪಡೆಯುವುದಕ್ಕೆ ಕೇವಲ 2 ಸೆಕೆಂಡ್ ಮಾತ್ರ ನೀಡುತ್ತಿದ್ದುದು ಅವರ ಗಮನಕ್ಕೆ ಬಂದಿತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಧರ್ಮದರ್ಶನಕ್ಕೆ ಬರುವವರಿಗೆ ಕನಿಷ್ಠ 5 ಸೆಕೆಂಡಾದರೂ ದೇವಿಯ ದರ್ಶನಕ್ಕೆ ಸಮಯ ನೀಡುವಂತೆ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.