ಜಿಲ್ಲೆ

ಮೈಸೂರಿನಲ್ಲಿ ಎಲ್ಲೆಂದರಲ್ಲಿ ಡೆಬ್ರಿಸ್ ಸುರಿದರೆ ಕ್ರಿಮಿನಲ್ ಕೇಸ್..!

ಸದೇಶ್ ಕಾರ್ಮಾಡ್ ಮೈಸೂರು
ದೇಶದ ಸ್ವಚ್ಛ ನಗರ ಪೈಕಿ ಒಂದಾಗಿರುವ ಮೈಸೂರಿನಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ (ಡೆಬ್ರಿಸ್) ಸುರಿದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಮಾತ್ರವಲ್ಲ, ಕ್ರಿಮಿನಲ್ ಕೇಸ್ ಕೂಡ ದಾಖಲಾಗಲಿದೆ.

ಕಟ್ಟಡ ತ್ಯಾಜ ವಿಲೇವಾರಿಗೆ ಹಂಚ್ಯಾ-ಸಾತಗಳ್ಳಿಯಲ್ಲಿ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ತೆರೆಯಲಾಗಿದ್ದು, ನಗರದಲ್ಲಿ ಉತ್ಪತಿಯಾ ಗುವ ಎಲ್ಲ ರೀತಿಯ ಕಟ್ಟಡ ತ್ಯಾಜ್ಯಗಳನ್ನು ಇಲ್ಲಿಯೇ ವಿಲೇವಾರಿ ಮಾಡಬೇಕು. ಆದರೆ, ಕೆಲವರು ನಗರದ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ತಂದು ಸುರಿಯುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಪಾಲಿಕೆ ಮುಂದಾಗಿದೆ.

ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯುವುದು ಕರ್ನಾಟಕ ಪೌರ ನಿಗಮಗಳ ಕಾಯ್ದೆ ಪ್ರಕರಣ 256ಕ್ಕೆ ವಿರುದ್ಧವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ, ದುರಸ್ತಿ ಹಾಗೂ ಕೆಡವುದರಿಂದ ಉತ್ಪತಿಯಾಗುವ ಕಟ್ಟಡ ತ್ಯಾಜ್ಯವನ್ನು ಹಂಚ್ಯಾ-ಸಾತಗಳ್ಳಿಯಲ್ಲಿ ಗುರುತಿಸಿರುವ ಖಾಲಿ ಜಾಗದಲ್ಲಿಯೇ ವಿಲೇವಾರಿ ಮಾಡಬೇಕು.

ರಾಜ್ಯದಲ್ಲಿ ಅತಿ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ನಗರಗಳ ಪೈಕಿ ಮೈಸೂರು ಮುಂಚೂಣಿಯ ಸ್ಥಾನದಲ್ಲಿ ಇದೆ. ಅದರಲ್ಲೂ ವಿಶೇಷವಾಗಿ ವಸತಿ ಬಡಾವಣೆಗಳು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರ್ಮಾಣಗೊಂಡಿದೆ. ಮೈಸೂರನ್ನು ನಿವೃತ್ತರ ಸ್ವರ್ಗ ಎಂದು ಕರೆಯುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳ ನಿವಾಸಿಗಳು ನಗರದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈಗಾಗಲೇ ನಗರದ ಹಲವಾರು ಹೊಸ ಬಡಾವಣೆಗಳು ನಗರ ಪಾಲಿಕೆ ವ್ಯಾಪ್ತಿಗೆ ಬಂದಿದ್ದು, ಅಂತಹ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ. ಕಟ್ಟಡ ನಿರ್ಮಾಣ ಸಂದರ್ಭ ಉತ್ಪತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಹೋದರೆ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವುದು ನಿಶ್ಚಿತ. ನಗರದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕಟ್ಟಡ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ.

ನಗರ ಸ್ವಚ್ಛತೆಯಲ್ಲಿ ಪ್ರತಿ ಬಾರಿ ದೇಶದ ಗಮನ ಸೆಳೆಯುತ್ತಿದೆ. ಆದರೆ, ಕಟ್ಟಡ ತ್ಯಾಜ್ಯ ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದು ನಗರಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ವಿವಿಧ ಕಡೆಗಳಲ್ಲಿ ಸೂಕ್ತ ಜಾಗಕ್ಕೆ ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 9.5 ಎಕರೆ ಜಾಗವನ್ನು ಹಂಚ್ಯಾ-ಸಾತಗಳ್ಳಿಯಲ್ಲಿ 30 ವರ್ಷಗಳ ಅವಗೆ ಗುತ್ತಿಗೆ ಆಧಾರದಲ್ಲಿ ನಗರ ಪಾಲಿಕೆಗೆ ನೀಡಿದೆ. ಇಲ್ಲಿ ಪ್ರತಿ ಟನ್ ಟಿಪ್ಪಿಂಗ್ ಶುಲ್ಕ ನೀಡಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು.

ಪ್ರತಿ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಹಿನ್ನಡೆ ಅನುಭವಿಸಲು ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿ ಆಗದೆ ಇರುವುದು ಸಹ ಒಂದು ಕಾರಣ. ಈ ಹಿಂದೆ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಎಲ್ಲರು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರು. ಸದರಿ ಜಾಗದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಪಾಲಿಕೆ ಕಡಿವಾಣ ಹಾಕಿದ ನಂತರ ಇದೀಗ ಜನರು ನಗರದ ವಿವಿಧೆಡೆ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲು ಪ್ರಾರಂಭಿಸಿದ್ದು, ಇದು ನಗರದ ಅಂದಗೆಡಿಸುತ್ತಿದೆ.

ನಗರದ ಕುಕ್ಕರಹಳ್ಳಿ ಕೆರೆಯ ಬಳಿಯಲ್ಲಿರುವ ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲೂ ತೋಟಗಾರಿಕೆ ಇಲಾಖೆಯವರು ಕಟ್ಟಡ ತ್ಯಾಜ್ಯವನ್ನು ತಂದು ಸುರಿದು ಹಳ್ಳವನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದರು. ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ ನೀಡಿದ ಸಂದರ್ಭ ಕಟ್ಟಡ ತ್ಯಾಜ್ಯವನ್ನು ಗಮನಿಸಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡಿದರು. ಕಟ್ಟಡ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಹ ಕಾನೂನು ಪಾಲನೆ ಮಾಡುತ್ತಿಲ್ಲ. ಕಾನೂನು ಉಲ್ಲಂಘಿಸುವ ಪ್ರತಿಯೊಬ್ಬರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಮಾತ್ರ ನಗರವನ್ನು ಡೆಬ್ರಿಸ್ ಮುಕ್ತಗೊಳಿಸಲು ಸಾಧ್ಯ.

ನಗರದಲ್ಲಿ ಕಟ್ಟಡ ತ್ಯಾಜ್ಯದ ವಿಲೇವಾರಿಗೆ ಹಂಚ್ಯಾ-ಸಾತಗಳ್ಳಿಯಲ್ಲಿ ಜಾಗ ಗುರುತಿಸಲಾಗಿದೆ. ಸಾರ್ವಜನಿಕರು ಡೆಬ್ರಿಸ್ ವಿಲೇವಾರಿಗೆ ಗುರುತಿಸಿದ ಜಾಗದಲ್ಲಿಯೇ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಆದರೆ, ಕೆಲವರು ನಗರದ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದು ಕಂಡು ಬಂದಿದೆ. ಈ ರೀತಿ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದು ಇನ್ನು ಮುಂದೆ ಕಂಡು ಬಂದರೆ ಅಂತಹವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲಾಗುವುದು. ಅಲ್ಲದೆ, ಕ್ರಿಮಿನಲ್ ಮೊಕದ್ದಮೆಯನ್ನು ಸಹ ಹೂಡಲಾಗುವುದು. ನಗರವನ್ನು ಸ್ವಚ್ಛವಾಗಿಡಲು ನಗರದ ಎಲ್ಲ ನಾಗರಿಕರು ಸಹಕರಿಸಬೇಕು.
ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ