ಆರ್.ಕೃಷ್ಣ ಮೈಸೂರು
ನಗರದ ಪಾರಂಪರಿಕ ಹೆಗ್ಗುರುತಾಗಿರುವ ದೊಡ್ಡ ಗಡಿಯಾರ ಗೋಪುರಕ್ಕೆ ಕಾಯಕಲ್ಪ ಆರಂಭವಾಗಿದೆ ಎನ್ನುವ ಸಮಾಧಾನದ ನಡುವೆಯೇ ಮತ್ತೆ ಬಿರುಕು ಮೂಡಲಿದೆ ಎನ್ನುವ ದುಗುಡ ಮನೆ ಮಾಡಿದೆ.
ನಿಯಮ ಪ್ರಕಾರ ಪಾರಂಪರಿಕ ಕಟ್ಟಡಗಳನ್ನು ಗಾರೆಯಿಂದ ನಿರ್ಮಿಸಬೇಕಾಗಿದ್ದರೂ, ದೊಡ್ಡ ಗಡಿಯಾರ ದುರಸ್ಥಿ ಕಾರ್ಯ ಕೈಗೊಂಡಿರುವ ಗುತ್ತಿಗೆದಾರ ಎಂ-ಸ್ಯಾಂಡ್ ಬಳಸುತ್ತಿದ್ದಾರೆ. ಹೀಗಾಗಿ ಗಡಿಯಾರದ ಗೋಪುರ ದುರಸ್ಥಿಗೊಂಡರೂ ಮುಂದೆ ಮತ್ತೆ ಬಿರುಕು ಬಿಡಲಿದೆ ಎಂದು ಪಾರಂಪರಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಅರಮನೆ ಮತ್ತು ಪುರಭವನದ ಸಮೀಪದ ಈ ಗಡಿಯಾರವನ್ನು ಸಂರಕ್ಷಿಸಿಲು ನಗರ ಪಾಲಿಕೆ ಕೆಲ ವರ್ಷಗಳ ಹಿಂದೆಯೇ ಆರ್ಥಿಕ ನೆರವು ನೀಡಿತ್ತು. ಡ್ರೋಣ್ ಮೂಲಕ ಪುರಾತತ್ವ ಹಾಗೂ ಪರಂಪರೆ ಇಲಾಖೆ ಮ್ಯಾಪಿಂಗ್ ನಡೆಸಿ ಅಂದಾಜು 35 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು.
ಪಾಲಿಕೆ ಆಡಳಿತಾತ್ಮಕ ಅನುಮೋದನೆ ಪಡೆದು ಎರಡು-ಮೂರು ವರ್ಷಗಳೇ ಕಳೆದರೂ ಕೆಲಸ ಮಾತ್ರ ಆರಂಭವಾಗಿರಲಿಲ್ಲ. ಇದೀಗ ದುರಸ್ತಿ ಕೆಲಸ ಆರಂಭವಾಗಿದೆ ಎಂದು ಪಾರಂಪರಿಕ ಸಂಸ್ಕೃತಿ ಪ್ರಿಯರು ಸಂತಸದ ಮಧ್ಯೆಯೇ ಗುತ್ತಿಗೆದಾರರು ಮಾಡುತ್ತಿರುವ ಕಾಮಗಾರಿ ಗೋಪುರದ ಗುಣಮಟ್ಟ ಕುರಿತು ಅನುಮಾನ ವ್ಯಕ್ತಪಡಿಸುವಂತಾಗಿದೆ.
ತಜ್ಞರ ಸಲಹೆಯಂತೆ ಗಾರೆ ಬಳಸಿ ಗಡಿಯಾರದ ಗೋಪುರ ಸಂರಕ್ಷಣೆ ಕಾರ್ಯ ನಡೆಯಬೇಕಾಗಿತ್ತು. ಆದರೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲದ ವ್ಯಕ್ತಿಗೆ ಕಾಮಗಾರಿ ನೀಡಿರುವುದೇ ಎಡವಟ್ಟಿಗೆ ಕಾರಣ. ವಿಪರ್ಯಾಸವೆಂದರೆ, ಕಾಮಗಾರಿ ಮಾತ್ರ ಯಾವುದೋ ಕಟ್ಟಡ ನವೀಕರಣ ಮಾಡುವಂತೆ ಅವೈಜ್ಞಾನಿಕವಾಗಿ ನಡೆಯುತ್ತಿರುವುದು.
ಗಡಿಯಾರದ ಮೇಲ್ಭಾಗದಲ್ಲಿ ಬಿರುಕು, ಒಳ ಭಾಗದಲ್ಲಿ ಶಿಥಿಲಾವಸ್ಥೆ ತಲುಪಿದೆ. ಘಂಟೆಯಲ್ಲಿ ನಿರಂತರವಾಗಿ ಬಿರುಕು ಮೂಡುತ್ತಲೇ ಇದೆ. ಗಡಿಯಾರದ ಕೆಳಗಡೆ ಹೆಗ್ಗಣಗಳು ಬಿಲ ತೋಡಿವೆ. ಸಿಡಿಲಿನಿಂದ ರಕ್ಷಣೆಗೆ ತಾಮ್ರದ ತಂತಿ ಹಾಕಿದ್ದು, ಇದೀಗ ಆ ತಂತಿಯನ್ನೂ ಕತ್ತರಿಸಿ ಕಳವು ಮಾಡಲಾಗಿದೆ. ಘಂಟೆ ಮೇಲಿರುವ ಗೋಪುರ ಆರ್ಚ್ ಬಿರುಕು ಮೂಡಿದೆ. ಮೇಲಿನ ಗುಮ್ಮಟವೂ ಬಿದ್ದು ಹೋಗಿದೆ. ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಇವುಗಳನ್ನು ಬಹು ಎಚ್ಚರಿಕೆಯಿಂದ ಪಾರಂಪರಿಕ ಮಾದರಿಯಲ್ಲಿ ಅನುಭವಿಗಳು ಕಾಮಗಾರಿ ಮಾಡಬೇಕು.
ಪಾರಂಪರಿಕ ಇಲಾಖೆ ಗುತ್ತಿಗೆ ಮೂಲಕ ಕಾಮಗಾರಿ ನಡೆಸಲು ಅನುಮತಿ ನೀಡಿದೆ. ಆದರೆ ತಜ್ಞರ ಸಲಹೆಯನ್ನು ಕಡೆಗಣಿಸಿ ಗಾರೆ ಬಳಸದೆ ಎಂ-ಸ್ಯಾಂಡ್ ಬಳಸಿ ದುರಸ್ಥಿ ಮಾಡುತ್ತಿರುವುದರಿಂದ ಅದು ಮತ್ತೆ ಬಿರುಕು ಬಿಡಲಿದೆ ಎಂದು ತಜ್ಞರು ಅಸಮಧಾನ ವ್ಯಕ್ತಪಡಿಸಿದರು.
ಇಲಾಖೆಗೆ ವರದಿ ಸಲ್ಲಿಸಲಾಗುವುದು
ಪಾರಂಪರಿಕ ತಜ್ಞರು ಹಾಗೂ ಪುರಾತತ್ವ ಇಲಾಖೆ ದೊಡ್ಡ ಗಡಿಯಾರದ ಬಗ್ಗೆ ಡ್ರೋಣ್ ಮ್ಯಾಪಿಂಗ್ ಹಾಗೂ ಮೈಕ್ರೊ ಸ್ಟಡಿ ಮಾಡಿ ವರದಿ ಪ್ರಕಾರ ತಕ್ಷಣ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲು ಸಲಹೆ ನೀಡಲಾಗಿತ್ತು. ಇದೀಗ ದುರಸ್ತಿ ಕಾರ್ಯ ಆರಂಭಗೊಂಡಿರುವುದು ಸಂತೋಷವಾದರೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವುದರಿಂದ ಬೇಸರವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಲಾಗುವುದು.
ಪ್ರೊ.ಎನ್.ಎಸ್.ರಂಗರಾಜು
ಸದಸ್ಯರು, ಪಾರಂಪರಿಕ ಸಂರಕ್ಷಣಾ ಸಮಿತಿ
ಗಡಿಯಾರದ ವಿಶೇಷತೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಮನೆಯಲ್ಲಿದ್ದ ನೌಕರರು ಮತ್ತು ಅಧಿಕಾರಿಗಳು ಹಣ ಸಂಗ್ರಹಿಸಿ 1927ರಲ್ಲಿ 75 ಅಡಿ ಎತ್ತರದ ದೊಡ್ಡ ಗಡಿಯಾರ ಗೋಪುರ ನಿರ್ಮಿಸಿದ್ದರು.
1990ರವರೆಗೂ ಸುಮಾರು ಐದು ಕಿ.ಮೀ.ವರೆಗೂ ಗಂಟೆಗೊಮ್ಮೆ ಘಂಟೆ ಸದ್ದು ಕೇಳಿಸುತ್ತಿತ್ತು. ಆದರೆ ಗೋಪುರ ಶಿಥಿಲಗೊಂಡಿದ್ದರಿಂದ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಘಂಟೆ ಬಾರಿಸುವುದನ್ನು ನಿಲ್ಲಿಸಲಾಯಿತು. ಇನ್ನೂ ಮೂರು ವರ್ಷದಲ್ಲಿ ಶತಮಾನೋತ್ಸವ ಕಾಣಲಿರುವ ದೊಡ್ಡ ಗಡಿಯಾರದ ಘಂಟೆ ಶಬ್ಧ 30 ವರ್ಷಗಳ ಬಳಿಕ ಮತ್ತೆ ಕೇಳಲಿದೆ ಎನ್ನುವ ಆಶಾದಾಯ ಬೆಳವಣಿಗೆ ಮಧ್ಯೆಯೇ ಈಗ ಗೋಪುರದ ಅಸ್ಥಿತ್ವವೇ ಆತಂಕದಲ್ಲಿದೆ.