ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಹುಲ್ಲೇಪುರ ಸಮೀಪ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳದ ಪರಿಣಾಮ ಗುಂಡಿಬಿದ್ದ ರಸ್ತೆಗಳಲ್ಲಿ ಮಳೆನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. 
ಜಿಲ್ಲೆ

ಹುಲ್ಲೇಪುರ ರಸ್ತೆಯಲ್ಲಿ ಹೊಂಡಗಳದ್ದೇ ದರ್ಬಾರು

ಗುಂಡ್ಲುಪೇಟೆ: ಲೋಕೋಪಯೋಗಿ ಇಲಾಖೆ ಖಾಸಗಿ ಜಮೀನು ಮಾಲೀಕನ ಕಿತ್ತಾಟದಿಂದ ತಾಲೂಕಿನ ಹುಲ್ಲೇಪುರ ಸಮೀಪ ರಸ್ತೆಯ ದೊಡ್ಡ ದೊಡ್ಡ ಹೊಂಡಗಳಲ್ಲಿ ಮಳೆನೀರು ನಿಂತು ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಿಸಲು ಟೆಂಡರ್ ಕರೆದಿದ್ದರೂ ಅರಣ್ಯ ಇಲಾಖೆ ಸಕಾಲದಲ್ಲಿ ರಸ್ತೆಯ ನಡುವೆ ಬೆಳೆದಿರುವ ಮರಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಖಾಸಗಿ ಜಮೀನಿನಲ್ಲಿ ರಸ್ತೆ: ತಾಲೂಕಿನ ಬೊಮ್ಮಲಾಪುರದಿಂದ ಹುಲ್ಲೇಪುರಕ್ಕೆ ಹೋಗುವ ರಸ್ತೆಯ ಬೆಳವಾಡಿ ಗೇಟ್ ಸಮೀಪ ಸುಮಾರು 70 ವರ್ಷಗಳ ಹಿಂದೆ ಜನರು ಬಳಸುತ್ತಿದ್ದ ಕಾಲು ದಾರಿಯನ್ನು ಲೋಕೋಪಯೋಗಿ ಇಲಾಖೆ ರಸ್ತೆಯಾಗಿ ಅಭಿವೃದ್ಧಿಗೊಳಿಸಿತ್ತು. ಹಿಂದೆ ಕಿರಿದಾಗಿದ್ದ ರಸ್ತೆಯನ್ನು ಕಾಲಕಾಲಕ್ಕೆ ವಿಸ್ತರಣೆ ಮಾಡಿ ಡಾಂಬರ್ ಹಾಕಲಾಗುತ್ತಿತ್ತು. ಭೂಮಿಯ ಮಾಲೀಕರಿಗೆ ಅಂದಿನ ಕಾಲದಲ್ಲಿ 100 ರೂ. ಪರಿಹಾರವನ್ನು ನೀಡಿದ್ದರೂ ಕಂದಾಯ ದಾಖಲೆಗಳಲ್ಲಿ ಇದು ದಾಖಲಾಗಿಲ್ಲ.

ಆದರೆ ಎಂಟು ವರ್ಷಗಳ ಹಿಂದೆ ಜಮೀನಿನ ಮಾಲೀಕ ಜಮ್ಮ ಜಮೀನನ್ನು ಅತಿಕ್ರಮಿಸಿ ರಸ್ತೆ ಮಾಡಲಾಗಿದೆ ಎಂದು ತಕರಾರು ತೆಗೆದಿದ್ದರಿಂದ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿತು. ಅದರ ಸರ್ವೇ ನಡೆಸಿದ ನಂತರ ರಸ್ತೆಗೆ ಜಮೀನು ಒತ್ತುವರಿ ಮಾಡಿಕೊಂಡಿದ್ದು ಖಚಿತವಾದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯು ನಿಜವಾದ ರಸ್ತೆಯನ್ನು ಗುರ್ತಿಸಿ 2 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ. ಒಂದು ಕಿಲೋ ಮೀಟರ್ ಉದ್ದದ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಮರ ಕಡಿಯದೆ ರಸ್ತೆ ನಿರ್ಮಾಣಕ್ಕೆ ಅಡ್ಡಿ: ಉದ್ದೇಶಿತ ರಸ್ತೆಯ ನಡುವೆ ಇರುವ ಮರಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ 2024ರ ಜೂನ್‌ನಲ್ಲಿ ಅರಣ್ಯ ಇಲಾಖೆಗೆ ಪತ್ರ ಬರೆದರೂ ಬಫರ್ ವಲಯದ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಿಲ್ಲ. ಈ ನಡುವೆ ಜಮೀನು ಮಾಲೀಕ ಅಲ್ಲಿನ ಮರಗಳನ್ನು ತೆರವು ಮಾಡದಂತೆ ಅರಣ್ಯ ಇಲಾಖೆ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರಿಂದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯ ಒಂದು ಕಿಲೋ ಮೀಟರ್ ಉದ್ದಕ್ಕೂ ಗುಂಡಿಗಳು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಇತ್ತೀಚೆಗೆ ಮಳೆಬಿದ್ದ ಪರಿಣಾಮ ರಸ್ತೆ ಯಾವುದು ಗುಂಡಿ ಯಾವುದು ಎಂಬುದೇ ತಿಳಿಯದಂತಾಗಿದೆ. ಈ ರಸ್ತೆಯಲ್ಲಿ ಹೊಸದಾಗಿ ಬರುವ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಮತ್ತು ಜಮೀನಿನವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.

ಎಸ್.ಜಿ.ಸತೀಶ್, ಶೆಟ್ಟಹಳ್ಳಿ ಗ್ರಾಮಸ್ಥ

ಒಂದು ಕಿಲೋಮೀಟರ್ ಉದ್ದದ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದು ಎಜೆನ್ಸಿಯವರೂ ಕಾಮಗಾರಿ ನಡೆಸಲು ಸಿದ್ಧರಾಗಿದ್ದಾರೆ. ಆದರೆ ಜಮೀನಿನ ಮಾಲೀಕ ಮರಗಳನ್ನು ಕಡಿಯದಂತೆ ಹೈಕೋರ್ಟ್ ಮೊರೆ ಹೋಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ತನ್ನ ಪರವಾಗಿ ವಕೀಲರನ್ನು ನೇಮಿಸಿಕೊಂಡಿದ್ದು ನ.4ರಂದು ವಿಚಾರಣೆಗೆ ಬರಲಿದೆ. ಕೋರ್ಟ್ ತೀರ್ಪು ಬಂದ ನಂತರ ಕಾಮಗಾರಿ ಆರಂಭಿಸಲಾಗುವುದು.

ವಿಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ